ಬೆಂಗಳೂರು: ಆನ್ಲೈನ್ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ವಾಹನ ನೋಂದಣಿ ಪ್ರಮಾಣಪತ್ರ ವಿತರಿಸುವ ಸರ್ಕಾರದ ಕ್ರಮಕ್ಕೆ ತಡೆ ನೀಡಿ ಮೊದಲಿಂತೆ ಸ್ಮಾರ್ಟ್ ಕಾರ್ಡ್ ಮೂಲಕವೇ ವಾಹನಗಳ ನೋಂದಣಿ ಪ್ರಮಾಣಪತ್ರ ವಿತರಿಸುವಂತೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ತೆರವು ಕೋರಿ ಸಾರಿಗೆ ಇಲಾಖೆಯು ಅರ್ಜಿ ಸಲ್ಲಿಸಿದೆ.
ಇಲಾಖೆ ಸಲ್ಲಿಸಿರುವ ಅರ್ಜಿ ಚಳಿಗಾಲದ ರಜೆ ಬಳಿಕ ವಿಭಾಗೀಯ ಪೀಠದ ಕಲಾಪದಲ್ಲಿ ವಿತರಣೆಗೆ ಬರಲಿದೆ. ಅರ್ಜಿಯಲ್ಲಿ ಸಾರಿಗೆ ಇಲಾಖೆಯು ಸಾರ್ವಜನಿಕರಿಗೆ ಅನುಕೂಲವಾಗಲೆಂದೇ ಕರ್ನಾಟಕ ಮೋಟಾರು ವಾಹನ ಕಾಯ್ದೆ-1989ರ ಸೆಕ್ಷನ್ 33ಕ್ಕೆ ತಿದ್ದುಪಡಿ ತಂದಿದೆ. ಅದರಂತೆ ನೋಂದಣಿಯನ್ನು ಸರಳೀಕರಿಸಲು ಅಧಿಕೃತ ವಾಹನ ಮಾರಾಟ ಪರವಾನಿಗೆ ಹೊಂದಿರುವ ಡೀಲರ್ಗಳಿಗೆ ವಾಹನಗಳ ನೋಂದಣಿ ಮಾಡುವ ಅಧಿಕಾರ ನೀಡಲಾಗಿದ್ದು, ಆನ್ಲೈನ್ ಮೂಲಕ ನೋಂದಣಿ ಪ್ರಮಾಣ ಪತ್ರ ವಿತರಿಸಲು ಅವಕಾಶ ಮಾಡಿಕೊಡಲಾಗಿದೆ. ಆದ್ದರಿಂದ ಸ್ಮಾರ್ಟ್ ಕಾರ್ಡ್ ವಿತರಿಸುವ ಕ್ರಮವನ್ನೇ ಮುಂದುವರೆಸುವಂತೆ ನೀಡಿರುವ ಮಧ್ಯಂತರ ಆದೇಶವನ್ನ ತೆರವು ಮಾಡಬೇಕು ಎಂದು ಸಾರಿಗೆ ಇಲಾಖೆ ಅರ್ಜಿಯಲ್ಲಿ ಮನವಿ ಮಾಡಿದೆ.
ಪ್ರಕರಣದ ಹಿನ್ನೆಲೆ:
ರಾಜ್ಯ ಸರ್ಕಾರ ಕರ್ನಾಟಕ ಮೋಟಾರು ವಾಹನ ಕಾಯ್ದೆ-1989ರ ನಿಯಮ 33ಕ್ಕೆ ತಿದ್ದುಪಡಿ ತಂದು, ಡೀಲರ್ಗಳಿಗೆ ಹೊಸ ವಾಹನಗಳ ನೋಂದಣಿ ಮಾಡಿಕೊಡುವ ಹಾಗೂ ಆನ್ಲೈನ್ ಮೂಲಕವೇ ನೋಂದಣಿ ಪ್ರಮಾಣ ಪತ್ರ ವಿತರಿಸುವ ಅಧಿಕಾರ ನೀಡಿದೆ. ಈ ಸಂಬಂಧ ಸಾರಿಗೆ ಇಲಾಖೆ 2021ರ ಅ.31ರಂದು ಅಧಿಸೂಚನೆ ಹೊರಡಿಸಿದೆ. ಇದನ್ನು ಪ್ರಶ್ನಿಸಿ ಈವರೆಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಒಪ್ಪಂದ ಮಾಡಿಕೊಂಡಿರುವ ರೊಸ್ಮೆರ್ಟಾ ಟೆಕ್ನಾಲಜೀಸ್ ಹೈಕೋರ್ಟ್ ಮೆಟ್ಟಿಲೇರಿದೆ.
ಸ್ಮಾರ್ಟ್ ಕಾರ್ಡ್ ವಿತರಿಸುವ ಸಂಬಂಧ ಸಂಸ್ಥೆ 2009ರಲ್ಲಿ ಸರ್ಕಾರದೊಂದಿದೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಅವಧಿ 2024ರವರೆಗೆ ಇದ್ದರೂ, ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು ಹೊಸ ನಿಯಮದ ಮೂಲಕ ಆನ್ಲೈನ್ ಮೂಲಕವೇ ನೋಂದಣಿ ಪ್ರಮಾಣ ಪತ್ರ ವಿತರಿಸುವ ಅಧಿಕಾರವನ್ನು ಡೀಲರ್ಗಳಿಗೆ ನೀಡಿದೆ. ಸರ್ಕಾರದ ಈ ನಿರ್ಧಾರ, ಒಪ್ಪಂದವನ್ನು ಉಲ್ಲಂಘಿಸಿದೆ. ಜತೆಗೆ ನಿಯಮಬಾಹಿರವಾಗಿದೆ. ಆದ್ದರಿಂದ ಆನ್ಲೈನ್ ಮೂಲಕ ವಾಹನಗಳ ನೋಂದಣಿ ಪ್ರಮಾಣಪತ್ರ ವಿತರಿಸುವ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದೆ.
ಅರ್ಜಿ ವಿಚಾರಣೆ ನಡೆಸಿದ್ದ ಸಿ.ಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ಡಿಸೆಂಬರ್ 7 ರಂದು ಈ ಮೊದಲು ಸ್ಮಾರ್ಟ್ ಕಾರ್ಡ್ ಮೂಲಕ ವಿತರಿಸುತ್ತಿದ್ದ ರೀತಿಯಲ್ಲೇ ನೋಂದಣಿ ಪತ್ರ ವಿತರಿಸುವುವದನ್ನು ಮುಂದುವರೆಸುವಂತೆ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದ್ದು, ಮುಂದಿನ ವಿಚಾರಣೆಯನ್ನು 2022ರ ಜನವರಿ 31ಕ್ಕೆ ನಿಗದಿಪಡಿಸಿದೆ.