ಬೆಂಗಳೂರು: ಸರ್ಕಾರದ ದುಂದುವೆಚ್ಚದ ಕುರಿತು ವಿಧಾನಸಭೆಯಲ್ಲಿ ಗುರುವಾರ ಗಂಭೀರ ಚರ್ಚೆ ನಡೆಯಿತು. ವಿಶೇಷ ಎಂದರೆ ಈ ಚರ್ಚೆಯಲ್ಲಿ ಪಕ್ಷಭೇದ ಮರೆತು ಎಲ್ಲ ಸದಸ್ಯರು ಪಾಲ್ಗೊಂಡು ಮಾತನಾಡಿದರು.
ಇಲಾಖಾ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಶಾಸಕ ಕೃಷ್ಣಭೈರೇಗೌಡ, ಸರ್ಕಿಟ್ ಹೌಸ್ ನಿರ್ಮಾಣದಲ್ಲಿ ದುಂದುವೆಚ್ಚ ಆಗುತ್ತಿರುವುದನ್ನು ಪ್ರಸ್ತಾಪಿಸಿದರು. ಅಷ್ಟು ದೊಡ್ಡ ಮಟ್ಟದ ಐಬಿಗಳನ್ನು ನಿರ್ಮಿಸುವುದರಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಲಾಭವಾಗುತ್ತದೆ ಎಂದು ದೂರಿದರು.
ಇದಕ್ಕೆ ದನಿಗೂಡಿಸಿದ ಜೆಡಿಎಸ್ ಶಾಸಕ ಲಿಂಗೇಶ್, ದೆಹಲಿಯ ಕರ್ನಾಟಕ ಭವನದಲ್ಲಿ ನಾಲ್ವರು ಐಎಎಸ್ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಅಷ್ಟು ಅಗತ್ಯವಿದೆಯೇ?. ಮಕ್ಕಳಿಗೆ ಶಿಕ್ಷಣ ಕೊಡಿಸಲು ಒಬ್ಬ ಅಧಿಕಾರಿ ಅಲ್ಲಿದ್ದಾರೆ ಎಂಬ ಮಾಹಿತಿ ಇದೆ. ಮೈಸೂರು ಜಿಲ್ಲಾಧಿಕಾರಿ ತಮ್ಮ ಬಂಗಲೆಯಲ್ಲಿ ಈಜುಕೊಳ ನಿರ್ಮಿಸಿದ್ದರು. ಇದರ ಅಗತ್ಯವಿತ್ತೇ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಹಲವು ಶಾಸಕರು ಪ್ರವಾಸಿ ಮಂದಿರ ಕಟ್ಟಿಸಲು ಪ್ರಸ್ತಾವನೆ ತರುತ್ತಿದ್ದಾರೆ. ಗದಗದಲ್ಲಿರುವ ಪ್ರವಾಸಿ ಮಂದಿರದ (ಐಬಿ) ಕಸ ಗುಡಿಸಲು ಐದಾರು ಜನ ಬೇಕು. ಹುಬ್ಬಳ್ಳಿಯಲ್ಲಿರುವ ಪ್ರವಾಸ ಮಂದಿರಕ್ಕೆ ಹೋಗಲು ವಾಕಿಂಗ್ ಮಾಡಿದಂತಾಗುತ್ತದೆ. ಚಿತ್ರದುರ್ಗದಲ್ಲಿ ಶಾಸಕ ತಿಪ್ಪಾರೆಡ್ಡಿಉತ್ತಮ ರೀತಿಯಲ್ಲಿ ಐಬಿ ನಿರ್ಮಿಸಿದ್ದಾರೆ ಎಂದರು.
ಆಗ ಸಭಾಧ್ಯಕ್ಷ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಆನಂದ್ ಮಾಮನಿ, ಚಿತ್ರದುರ್ಗದ ಪ್ರವಾಸಿ ಮಂದಿರವನ್ನು ಮಾದರಿಯಾಗಿ ಪರಿಗಣಿಸಿ ಎಂಬ ಸಲಹೆ ಮಾಡಿದರು. ಇದಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಚಿತ್ರದುರ್ಗದಲ್ಲಿ ನಿರ್ಮಿಸಿರುವ ಪ್ರವಾಸಿ ಮಂದಿರದ ಪ್ಲಾನ್ ಹೈದರಾಬಾದ್ ನಿಜಾಮರದ್ದು. ಇದಕ್ಕೂ ಮುನ್ನ ಇಕ್ಬಾಲ್ ಅನ್ಸಾರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಟ್ಟಿಸಿದ್ದರು ಎಂದರು. ಈ ವೇಳೆ ಆಡಳಿತ ಪಕ್ಷ ಸದಸ್ಯ ವೀರಣ್ಣ ಚರಂತಿಮಠ್, ಐಬಿಯನ್ನೇ ಕಟ್ಟಬಾರದು ಎಂದರು.!
'ನನಗೆ ಮನೆಯಿಲ್ಲ': ಜೆಡಿಎಸ್ ಶಾಸಕ ಅನ್ನದಾನಿ ಮಾತನಾಡಿ, ನನಗೆ ಊರಲ್ಲೂ ಮನೆಯಿಲ್ಲ. ಮಳವಳ್ಳಿಯಲ್ಲೂ ಮನೆಯಿಲ್ಲ. ಮಳವಳ್ಳಿಯಲ್ಲಿರುವ ಸಣ್ಣ ಐಬಿಯಲ್ಲೇ ಶಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಶಾಸಕರಿಗೆ ಕಚೇರಿ, ನಿವಾಸಗಳಿಲ್ಲ ಸರ್ಕಿಟ್ ಹೌಸನ್ನೇ ಸರಿಯಾಗಿ ನಿರ್ಮಾಣ ಮಾಡಬೇಕೆಲ್ಲವೇ ಎಂದರು. ಇದಕ್ಕೆ ಶಾಸಕರಾಗಿ ನೀವೇ ಅಸಹಾಯಕತೆ ವ್ಯಕ್ತಪಡಿಸಿದರೆ ನಿಮಗೆ ಮತ ನೀಡಿದ ಮತದಾರರ ಪರಿಸ್ಥಿತಿ ಏನಾಗಬೇಕು ಎಂದು ಸಭಾಧ್ಯಕ್ಷರು ಪ್ರಶ್ನಿಸಿದರು.
'ಸಿರಿಧಾನ್ಯ ಬೆಳೆಯುವವರಿಗೆ ಪ್ರೋತ್ಸಾಹ ಧನ ಕೊಡಿ': ಇದಕ್ಕೂ ಮುನ್ನ ಶಾಸಕ ಕೃಷ್ಣಭೈರೇಗೌಡ, ಸಿರಿಧಾನ್ಯ ಬೆಳೆಯುವ ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಸರ್ಕಾರ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ನಮ್ಮ ಸರ್ಕಾರವಿದ್ದಾಗ ಪ್ರತಿ ಹೆಕ್ಟೇರ್ 10 ಸಾವಿರ ರೂ. ಆರ್ಥಿಕ ನೆರವು ನೀಡುತ್ತಿತ್ತು. ಈ ಸರ್ಕಾರ ಬಂದ ಮೇಲೆ ಪ್ರೋತ್ಸಾಹ ಧನ ನಿಲ್ಲಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಒಣ ಬೇಸಾಯ ಅಭಿವೃದ್ದಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೃಷಿ ಹೊಂಡ ನಿರ್ಮಾಣ ಅಂತರ್ಜಲ ವೃದ್ದಿಗೆ ಸಹಕಾರಿಯಾಗಿತ್ತು. ಅದನ್ನೂ ನಿಲ್ಲಿಸಲಾಗಿದೆ. ಮತ್ತೆ ಮುಂದುವರೆಸುವುದು ಸೂಕ್ತ. ಸಿರಿಧಾನ್ಯ ಮೇಳಗಳನ್ನು ಮಾಡಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು. ನೀರಿನ ಮಿತ ಬಳಕೆಗೆ ಹನಿ ನಿರಾವರಿ ಹಾಗೂ ತುಂತುರು ನೀರಾವರಿಗೆ ನೀಡುವ ಸಹಾಯಧನವನ್ನು ಹೆಚ್ಚಿಸಬೇಕು ಎಂದು ಸಲಹೆ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ.ಪಾಟೀಲ್, ಅಧಿಕಾರಿಗಳೊಂದಿಗೆ ಚರ್ಚಿಸಿ ಸಿರಿಧಾನ್ಯ ಮೇಳ ಆಯೋಜಿಸುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ 1 ಸಾವಿರ ಡಿ ಗ್ರೂಪ್ ನೌಕರರ ನೇಮಕಾತಿ: ಸಚಿವ ಅಶ್ವತ್ಥ ನಾರಾಯಣ