ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ವಿಚಾರಕ್ಕೆ ಸಂಬಂಧಿಸಿದಂತೆ ಕೋಡಿಹಳ್ಳಿ ಚಂದ್ರಶೇಖರ್ ಹತ್ತಿರ ಹೋಗುವ ಪ್ರಶ್ನೆಯೇ ಬರುವುದಿಲ್ಲ, ಇದಕ್ಕೆ ನಾಲ್ಕು ನಿಗಮಗಳ ಸಂಘಟನೆ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ. ರೈತರ ಸಮಸ್ಯೆ ಬಂದಾಗ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ರತ್ನಗಂಬಳಿ ಹಾಸಿ ಕರೆದು ಮಾತನಾಡುತ್ತೇವೆ ಎಂದು ಡಿಸಿಎಂ ಗೋವಿಂದ ಕಾರಜೋಳ ಟಾಂಗ್ ನೀಡಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಡಿಹಳ್ಳಿ ಚಂದ್ರಶೇಖರ್ ಇಂತಹ ಸಂಘಟನೆಗಳ ಸಭೆಯಲ್ಲಿ ಭಾಗವಹಿಸಿ, ಸಿಬ್ಬಂದಿ ದಾರಿ ತಪ್ಪಿಸುವ ಕೆಲಸ ಮಾಡಬಾರದು. ರಾಜ್ಯದಲ್ಲಿ ಸಾರಿಗೆ ನೌಕರರು ಬೇಡಿಕೆ ಈಡೇರಿಕೆಗೆ ಹೋರಾಟ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಹೋರಾಟ ತಪ್ಪಲ್ಲ. ಆದರೆ, ಕೋಡಿಹಳ್ಳಿ ಚಂದ್ರಶೇಖರ್ ಪ್ರಚಾರಕ್ಕಾಗಿ ಮುಷ್ಕರ ನಿರತರನ್ನು ಎತ್ತಿಕಟ್ಟುತ್ತಿರುವುದು ಸರಿಯಲ್ಲ ಎಂದರು.
ಸರ್ಕಾರ ಒಂದು ಬೇಡಿಕೆ ಬಿಟ್ಟು ಇತರೆ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಮುಂದಾಗಿದೆ. ಮಾನವೀಯತೆಯಿಂದ ಹಾಗೂ ಕುಟುಂಬದ ಹಿತದೃಷ್ಟಿಯಿಂದ ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ಕೊಡಲು ಸರ್ಕಾರ ಒಪ್ಪಿಕೊಂಡಿದೆ. ಸರ್ಕಾರಿ ನೌಕರರನ್ನಾಗಿ ಮಾಡುವ ಒಂದು ಬೇಡಿಕೆ ಬಿಟ್ಟು ಉಳಿದ ಎಲ್ಲಾ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಸಿದ್ಧ. ಹಾಗಾಗಿ ನೌಕರರು ಮುಷ್ಕರ ಕೈಬಿಡಬೇಕು. ಸಾರಿಗೆ ಸಂಸ್ಥೆಯ ನಷ್ಟ ತಪ್ಪಿಸಲು ಸರ್ಕಾರದ ಜೊತೆ ಸಹಕಾರ ನೀಡಿ ಎಂದು ಮನವಿ ಮಾಡಿದರು.
ಈ ಸಮಸ್ಯೆ ಸೃಷ್ಟಿಯಾದಾಗಿನಿಂದ ಎಲ್ಲರೂ ಕೂಡ ನೌಕರರ ಮನವೊಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಸಮಸ್ಯೆ ಪರಿಹರಿಸಲು ಡಿಸಿಎಂ ಸವದಿ ಕೈಯಲ್ಲಿ ಆಗಿಲ್ಲ ಎಂದು ಬೇರೆ ಸಚಿವರು ಮಧ್ಯಪ್ರವೇಶ ಮಾಡಿಲ್ಲ. ನಾವು ಮುಷ್ಕರ ನಿರತರನ್ನು ಒಪ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಸಾರಿಗೆ ನೌಕರರನ್ನು ದಿಕ್ಕು ತಪ್ಪಿಸುತ್ತಿರುವವರಿಗೆ ತಕ್ಕ ಶಾಸ್ತಿ ಕಾದಿದೆ : ಡಿಸಿಎಂ ಅಶ್ವತ್ಥ್ ನಾರಾಯಣ