ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರವನ್ನು ಪಾಲಿಕೆಯ ಎಲ್ಲ ವಿದ್ಯುತ್ ಚಿತಾಗಾರಗಳಲ್ಲೂ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ನಗರದ ಕೆ.ಸಿ.ಜನರಲ್, ರಾಜಾಜಿನಗರದ ಇಎಸ್‌ಐ, ಲೈಫ್‌ಸೆಲ್ ಲ್ಯಾಬ್, ವಿಕ್ಟೋರಿಯಾ ಹಾಗೂ ಕಿದ್ವಾಯಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಕೋವಿಡ್ ಸೋಂಕು ಪರೀಕ್ಷೆ ಮತ್ತು ಚಿಕಿತ್ಸೆ, ಲ್ಯಾಬ್ ಹಾಗೂ ಲಸಿಕೆ ನೀಡುವುದನ್ನು ಸಚಿವರು ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಡಿಸಿಎಂ, ನಗರದ 12 ವಿದ್ಯುತ್ ಚಿತಾಗಾರಗಳಲ್ಲೂ ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರ ನಡೆಸುವುದರಿಂದ ಸಮಸ್ಯೆ ಆಗುವುದಿಲ್ಲ. ನಗರದಲ್ಲಿ ಕೊರೊನಾ ಸೋಂಕು ಪರೀಕ್ಷೆ ಹೆಚ್ಚಿಸಿ ಹಾಗೂ 24 ಗಂಟೆಯ ಒಳಗೆ ವರದಿ ಬರುವಂತೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ರಾತ್ರಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಔಷಧ ನಿಯಂತ್ರಕ ಸುರೇಶ್ ಜೊತೆ ಔಷಧ ಸರಬರಾಜಿನಲ್ಲಿ ಆಗುತ್ತಿರುವ ಲೋಪಗಳ ಕುರಿತು ಚರ್ಚಿಸಿದರು. ಈ ವೇಳೆ ಮಾತನಾಡಿದ ಅವರು, ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ 400 ಬೆಡ್ಗೆ ಅವಕಾಶ ಇದ್ದರೂ ಆಮ್ಲಜನಕದ ಕೊರತೆ ಇದೆ. ಹೀಗಾಗಿ, ಒಂದು ಟ್ಯಾಂಕರ್ ಆಮ್ಲಜನಕ ಸರಬರಾಜು ಮಾಡಲಬೇಕು. ಪಶ್ಚಿಮ ವಲಯದ ಆಸ್ಪತ್ರೆಗಳಲ್ಲಿ ಔಷಧ ಕೊರತೆಯಿದ್ದು, ನಿತ್ಯ ಕನಿಷ್ಠ 10 ಲಕ್ಷ ರೂ. ಹಂಚಿಕೆ ಮಾಡಿದರೆ ಸ್ಥಳೀಯವಾಗಿಯೇ ಆಸ್ಪತ್ರೆಗಳಲ್ಲಿ ಖರೀದಿ ಮಾಡಿಕೊಳ್ಳುತ್ತಾರೆ.
ಲ್ಯಾಬ್‌ಗಳಿಗೆ ನಿತ್ಯ ಕನಿಷ್ಠ ಮೂರು ಬ್ಯಾಚ್‌ಗಳಲ್ಲಿ ಸ್ಯಾಂಪಲ್ ಕಳುಹಿಸಿ ಪರೀಕ್ಷೆಗೊಳಪಡಿಸಿದ 24 ಗಂಟೆಗಳ ಒಳಗಾಗಿ ವರದಿ ಬರುವಂತೆ ಮಾಡುವುದರಿಂದ ಸೋಂಕು ದೃಢಪಟ್ಟವರು ಶೀಘ್ರ ಚಿಕಿತ್ಸೆ ಪಡೆಯಬಹುದು. ಇದರಿಂದ ಜೀವಕ್ಕೆ ಹಾನಿ ಆಗುವುದನ್ನು ತಪ್ಪಿಸಬಹುದು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅನುದಾನ
ನಗರದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಪಿಪಿಇ ಕಿಟ್ ಸೇರಿದಂತೆ ಅತ್ಯಗತ್ಯ ವಸ್ತುಗಳು ಇಲ್ಲದೆ ಪರದಾಡುತ್ತಿರುವುದು ವರದಿಯಾಗಿತ್ತು. ಹೀಗಾಗಿ, ಪಾಲಿಕೆ ವ್ಯಾಪ್ತಿಯ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಸಿಬ್ಬಂದಿ ಹಾಗೂ ವೈದ್ಯರು ಕೊರೊನಾ ಸೋಂಕು ತಡೆಗೆ ಅಗತ್ಯವಾದ ಪರಿಕರ ಖರೀದಿಸಲು, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ.
ಅನುದಾನ ಬಳಕೆ ವಿಧಿಸಲಾಗಿರುವ ಷರತ್ತುಗಳು
ಕೋವಿಡ್ ತಡೆಗೆ ಪೂರಕ ಯೋಜನೆಗಳಿಗೆ ಮಾತ್ರ ಅನುದಾನ ಬಳಸಬೇಕು. ಪಿಪಿಇ ಕಿಟ್, ಎನ್-95 ಮಾಸ್ಕ್, ಸರ್ಜಿಕಲ್ ಮಾಸ್ಕ್ ಸೇರಿದಂತೆ ಅಗತ್ಯ ಸಾಧನಗಳನ್ನು ಮಾತ್ರ ಖರೀದಿ ಮಾಡಬೇಕು. ಕೋವಿಡ್ ಲಸಿಕೆ, ಫಲಾನುಭವಿಗಳನ್ನು ವಾಹನದಲ್ಲಿ ಕರೆತರಲು ಮತ್ತು ಲಸಿಕೆ ಬಗ್ಗೆ ಅರಿವು ಮೂಡಿಸಲು ಯಾವುದೇ ಸಾಧನ ಖರೀದಿಗೆ ಮುನ್ನ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿ ಅನುಮೋದನೆ ದೊರೆಯಬೇಕು.
ಇದನ್ನೂ ಓದಿ: ಎಸ್‌ಸಿ ಕ್ಷೇತ್ರದಿಂದ ಬೇಡ ಜಂಗಮ ಅಭ್ಯರ್ಥಿ ಸ್ಪರ್ಧೆಗೆ ಹೈಕೋರ್ಟ್ ಅನುಮತಿ