ದೊಡ್ಡಬಳ್ಳಾಪುರ: ಗೋಶಾಲೆಗೆ ರಸ್ತೆ ನಿರ್ಮಿಸಲು ಸರ್.ಎಂ.ವಿಶ್ವೇಶ್ವರಯ್ಯ ನಿರ್ಮಾಣದ ಘಾಟಿ ಬಳಿಯ ಪಿಕಪ್ ಡ್ಯಾಂ ಏರಿ ಒಡೆದು ಹಾಕಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಬಳಿಯ ಪಿಕಪ್ ಡ್ಯಾಂ ವಿಶ್ವೇಶ್ವರಯ್ಯ ಪಿಕ್ ಡ್ಯಾಂ ಮತ್ತು ಘಾಟಿ ಡ್ಯಾಂ ಎಂದೇ ಪ್ರಸಿದ್ಧಿ. ಮಳೆಗಾಲದಲ್ಲಿ ಡ್ಯಾಂನಿಂದ ಹೊರಬರುವ ನೀರು ಜಲಪಾತವನ್ನ ಸೃಷ್ಟಿಸುತ್ತಿತ್ತು. ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಬರುತ್ತಿದ್ದ ಪ್ರವಾಸಿಗರು ಡ್ಯಾಂಗೂ ಭೇಟಿ ನೀಡಿ ಜಲಪಾತದ ಸೌಂದರ್ಯ ಸವಿಯುತ್ತಿದ್ದರು. ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಡ್ಯಾಂನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು.
ಡ್ಯಾಂ ಬಳಿಯೇ ಗೋಶಾಲೆ ಇದ್ದು, ಗೋಶಾಲೆಗೆ ಸಂಪರ್ಕಿಸಲು ರಸ್ತೆ ನಿರ್ಮಾಣ ಕಾಮಾಗಾರಿ ಆರಂಭಿಸಲಾಗಿತ್ತು. ಡ್ಯಾಂ ಹಿನ್ನೀರು ಗೋಶಾಲೆವರೆಗೂ ನಿಂತಿತ್ತು. ಇದರಿಂದ ರಸ್ತೆ ನಿರ್ಮಾಣಕ್ಕೆ ತೊಂದರೆಯಾಗಿತ್ತು. ಡ್ಯಾಂ ನೀರು ಖಾಲಿ ಮಾಡಿ ಕಾಮಗಾರಿ ಪ್ರಾರಂಭ ಮಾಡುವ ಕಾರಣಕ್ಕೆ ಡ್ಯಾಂನ ಮಣ್ಣಿನ ದಿಬ್ಬದಲ್ಲಿ ಜೆಸಿಬಿ ಮೂಲಕ ಕಾಲುವೆ ಮಾಡಿ ನೀರು ಖಾಲಿ ಮಾಡಲಾಗಿತ್ತು.
ಕಾಲುವೆಯಿಂದ ಭಾರಿ ಪ್ರಮಾಣದ ನೀರು ಹರಿದು ಹೋಗಿತ್ತು. ಇದಕ್ಕಿದಂತೆ ಕಾಲುವೆಯಲ್ಲಿ ನೀರು ಹರಿದು ಬರುವುದನ್ನ ಗಮನಿಸಿದ ರೈತರು ಡ್ಯಾಂ ಬಳಿ ಬಂದು ನೋಡಿದಾಗ ಡ್ಯಾಂಗೆ ಹಾನಿ ಮಾಡಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಜೆಸಿಬಿ ಮೂಲಕವೇ ಕಾಲುವೆ ಬಂದ್ ಮಾಡಿ ನೀರು ನಿಲ್ಲಿಸಲಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಮೋಹನ್ ಕುಮಾರಿ ಭೇಟಿ ನೀಡಿ ತಪಿತಸ್ಥರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಜತೆಗೆ ಸ್ಥಳದಲ್ಲಿ ಯಾವುದೇ ಕೆಲಸ ಮಾಡದಂತೆ ಸೂಚನೆ ನೀಡಿದ್ದಾರೆ.