ಬೆಂಗಳೂರು : ಸಚಿವ ಅಶ್ವತ್ಥ್ ನಾರಾಯಣ ಭೇಟಿ ಹೇಳಿಕೆ ವಿಚಾರವಾಗಿ ಸಿಟ್ಟಾದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಇಂದು ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಎಐಸಿಸಿ ಚಿಂತನಾ ಶಿಬಿರದಲ್ಲಿ ಭೇಟಿಯಾದರು.
ಈ ವೇಳೆ ಉಭಯ ನಾಯಕರು ಆತ್ಮೀಯವಾಗಿ ಮಾತುಕತೆ ನಡೆಸಿದರು. ಇದೇ ಸಂದರ್ಭ ಪ್ರತಿಪಕ್ಷ ಸಿದ್ದರಾಮಯ್ಯ ಅವರು ಉಪಸ್ಥಿತರಿದ್ದರು. ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ಕೇಳಿಬಂದ ಆರೋಪದಿಂದ ಮುಕ್ತಗೊಳ್ಳಲು ಎಂ ಬಿ ಪಾಟೀಲ್ರನ್ನು ಭೇಟಿಯಾಗಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ಇದು ಎಂ ಬಿ ಪಾಟೀಲ್ರಿಗೆ ತೀವ್ರ ಮುಜುಗರ ಉಂಟು ಮಾಡಿತ್ತು. ಡಿಕೆಶಿ ಹೇಳಿಕೆ ವಿರುದ್ಧ ಪಾಟೀಲರೇ ಆಕ್ಷೇಪ ವ್ಯಕ್ತಪಡಿಸಿದ್ದರು. ಅಶ್ವತ್ಥ್ ನಾರಾಯಣರನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಅಲ್ಲದೇ, ಮಾಜಿ ಸಂಸದೆ, ನಟಿ ರಮ್ಯಾ ಕೂಡ ಈ ಬಗ್ಗೆ ಡಿಕೆಶಿ ವಿರುದ್ಧ ಸರಣಿ ಟ್ವೀಟ್ ಮಾಡಿ ಅಸಮಾಧಾನ ಹೊರ ಹಾಕಿದ್ದರು. ಎಂ.ಬಿ. ಪಾಟೀಲ್ ಬೆಂಬಲಕ್ಕೆ ನಿಂತಿದ್ದರು. ಡಿಕೆಶಿ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷ ತೀವ್ರ ಮುಜುಗರಕ್ಕೊಳಬೇಕಾಯಿತು. ಜೊತೆಗೆ ಉಭಯ ನಾಯಕರ ಮಧ್ಯೆ ತಿಕ್ಕಾಟ ಶುರುವಾಗಿತ್ತು.
ಇದೀಗ ರಾಜಸ್ತಾನದ ಉದಯಪುರದಲ್ಲಿ ನಡೆಯುತ್ತಿರುವ ಎಐಸಿಸಿ ಚಿಂತನಾ ಶಿಬಿರದಲ್ಲಿ ಉಭಯ ನಾಯಕರು ಪರಸ್ಪರ ಆತ್ಮೀಯವಾಗಿ ಮಾತುಕತೆ ನಡೆಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲೇ ಇಬ್ಬರು ನಾಯಕರು ಭೇಟಿಯಾದರು. ಆ ಮೂಲಕ ತಮ್ಮ ಮಧ್ಯೆ ಉಂಟಾಗಿದ್ದ ಅಸಮಾಧಾನ, ಗೊಂದಲಕ್ಕೆ ತೆರೆ ಎಳೆಯಲು ಯತ್ನಿಸಿದರು.
ಇತ್ತ ಡಿಕೆಶಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಟ್ವೀಟ್ ವಾರ್ ನಡೆದಿತ್ತು. ರಾಜ್ಯ ಉಸ್ತುವಾರಿ ಸುರ್ಜೇವಾಲಾ ಉಭಯ ನಾಯಕರಿಗೂ ಪರಸ್ಪರ ಗೊಂದಲ ನಿವಾರಿಸಿಕೊಳ್ಳುವಂತೆ ಸಲಹೆ ಕೂಡ ನೀಡಿದ್ದರು.
ಓದಿ: ಮತಾಂತರ ನಿಷೇಧದ ಸುಗ್ರೀವಾಜ್ಞೆಗೆ ಸಿದ್ದರಾಮಯ್ಯ ಕಿಡಿ ; ಸುಗ್ರೀವಾಜ್ಞೆ ತಿರಸ್ಕರಿಸಲು ರಾಜ್ಯಪಾಲರಿಗೆ ಮನವಿ