ಬೆಂಗಳೂರು: ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆಂದು ಹೋಗಿ ದೃಷ್ಟಿಯನ್ನೇ ಕಳೆದುಕೊಂಡಿದ್ದ 20 ಮಂದಿ ಇಂದಿಗೂ ಅಂಧಕಾರದಲ್ಲೇ ಬದುಕು ನಡೆಸುವಂತಾಗಿದೆ.
ಮಿಂಟೋ ಆಸ್ಪತ್ರೆ ಆಡಳಿತ ಮಂಡಳಿ ಎರಡು-ಮೂರು ಲಕ್ಷ ಪರಿಹಾರ ಹಣ ನೀಡಿ ಕೈತೊಳೆದುಕೊಂಡಿದೆ. ಕಣ್ಣು ಕಳೆದುಕೊಂಡವರು ಅವರಿಗಾಗಿರುವ ಅನ್ಯಾಯಕ್ಕೆ ನ್ಯಾಯ ದೊರೆಯಬೇಕೆಂದು ವೈದ್ಯರು ಮತ್ತು ಆಡಳಿತ ಮಂಡಳಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಶಸ್ತ್ರಚಿಕಿತ್ಸೆಯಿಂದ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದ ಸುಜಾತ ಮಾತನಾಡಿ, ರಕ್ಷಣಾ ವೇದಿಕೆಯವರ ಸಹಾಯದೊಂದಿಗೆ ಇಪ್ಪತ್ತು ಜನರೂ ಪ್ರತ್ಯೇಕವಾಗಿ ಕೋರ್ಟ್ ಮೆಟ್ಟಿಲೇರಲಿದ್ದೇವೆ ಎಂದರು.
ಐದು ಜನ ಎರಡೂ ಕಣ್ಣು ಕಳೆದುಕೊಂಡು ಕತ್ತಲಲ್ಲಿದ್ದಾರೆ. ಉಳಿವರಿಗೂ ಒಂದಲ್ಲ ಒಂದು ರೀತಿಯಲ್ಲಿ ಕಣ್ಣಿನ ಸಮಸ್ಯೆ ಇದೆ. ತಪ್ಪು ಮಾಡಿದವರು ಆರಾಮಾಗಿದ್ದಾರೆ. ಆದರೆ, ತಪ್ಪು ಮಾಡದೇ ಇರುವ ನಾವು, ಇರುವ ಕೆಲಸವನ್ನೂ ಕಳೆದುಕೊಂಡು ಖಾಲಿ ಕುಳಿತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಬಡ ರೋಗಿಗಳಿಗೆ ನಮಗಾಗಿರುವ ಅನ್ಯಾಯ ಇನ್ನು ಮುಂದೆ ಆಗಬಾರದು. ನಾನು ಕೂಡ ಈ ಹಿಂದೆ ಟೇಲರಿಂಗ್ ವೃತ್ತಿ ಮಾಡ್ತಿದ್ದೆ. ಕಣ್ಣು ಕಳೆದುಕೊಂಡು ಬಟ್ಟೆ ಹೊಲಿಯಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಂದಕ್ಕೂ ಬೇರೆಯವರ ಮೇಲೆ ಅವಲಂಬಿತವಾಗಿದ್ದೇನೆ ಎಂದು ನೋವು ತೋಡಿಕೊಂಡರು.