ಬೆಂಗಳೂರು: ಪಾದರಾಯನಪುರ ವಾರ್ಡ್ ಒಂದರಲ್ಲೇ 46 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ವಾರ್ಡ್ನಲ್ಲಿ ಸಾಮೂಹಿಕ ಕೊರೊನಾ ಸೋಂಕು ತಪಾಸಣೆ ನಡೆಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.
ಇಂದು ಒಂದು ದಿನದ ಮಟ್ಟಿಗೆ ಬ್ರೇಕ್ ನೀಡಿರುವ ಪಾಲಿಕೆ ಅಧಿಕಾರಿಗಳು ನಾಳೆಯಿಂದ ಸೋಂಕು ಪತ್ತೆ ಪರೀಕ್ಷೆ ಆರಂಭಿಸಲಿದ್ದಾರೆ. ಈವರೆಗೂ 185 ನಿವಾಸಿಗಳ ಸೋಂಕು ಪರೀಕ್ಷೆ ನಡೆಸಲಾಗಿದೆ. ಪಾದರಾಯನಪುರ ವಾರ್ಡ್‌ನ 5ನೇ ಕ್ರಾಸ್ ರಸ್ತೆಯಿಂದ 11ಕ್ರಾಸ್ವರೆಗೂ ವಾಸಿಸುತ್ತಿರುವ 185 ಜನರ ಸ್ಯಾಂಪಲ್ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯಿಂದಾಗಿ ಸಾಕಷ್ಟು ಜನರಲ್ಲಿ ಸೋಂಕು ದೃಢಪಟ್ಟಿದೆ.
ಪಾಲಿಕೆ ಅಧಿಕಾರಿಗಳು ಪಾದರಾಯನಪುರ ವಾರ್ಡ್‌ನ ಪ್ರತಿ ಮನೆ ಮನೆ ಟೆಸ್ಟ್ ನಡೆಸಲಿದ್ದಾರೆ. ಒಟ್ಟು ಇಪ್ಪತ್ತೈದು ಸಾವಿರ ಜನರ ಆರೋಗ್ಯ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಪ್ರತಿಯೊಂದು ಮನೆಯಲ್ಲೂ ಒಬ್ಬರನ್ನ ಆಯ್ಕೆ ಮಾಡಿ ವಯಸ್ಸಾದವರು, ರೋಗ ಲಕ್ಷಣ ಇದ್ದರಿಗೆ ಮೊದಲ ಆದ್ಯತೆ ನೀಡಿ ಪರೀಕ್ಷೆ ಮಾಡಲಾಗುತ್ತದೆ. ಒಟ್ಟು 9369 ಮನೆಗಳು ಈ ವಾರ್ಡಿನಲ್ಲಿವೆ.
ಈಗಾಗಲೇ ಕೊರೊನಾ ಸೋಂಕಿತರು ಪಾದರಾಯನಪುರ ಪಶ್ಚಿಮ ಭಾಗದಲ್ಲಿ ಹೆಚ್ಚು ಓಡಾಡಿರುವುದರಿಂದ ಈ ಭಾಗದಲ್ಲಿ ಅಂದರೆ 8,9,10 ಹಾಗೂ 11ನೇ ಕ್ರಾಸ್ನಲ್ಲಿ ಕೊರೊನಾ ಟೆಸ್ಟ್ ಹೆಚ್ಚಾಗಿ ಮಾಡಲಾಗುತ್ತದೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ.ಮನೋರಂಜನ್ ಹೆಗಡೆ ತಿಳಿಸಿದ್ದಾರೆ. ಪೈಪ್ ಲೈನ್ ರೋಡ್, ಟೆಲಿಕಾಂ ರೈಲ್ವೆ ರೋಡ್ಗಳಲ್ಲೂ ಆಯ್ದ ಕಡೆ ಕೊರೊನಾ ಟೆಸ್ಟ್ ಮಾಡಲಾಗುತ್ತದೆ.
ಶಿವಾಜಿನಗರದಲ್ಲೂ ಇಂದು ಯಾವುದೇ ಸ್ಯಾಂಪಲ್ ಕಲೆಕ್ಟ್ ಮಾಡಿಲ್ಲ. ಈ ವಾರ್ಡಿನಲ್ಲಿ ಐದು ಕೊರೊನಾ ಪ್ರಕರಣ ದೃಢಪಟ್ಟಿರುವುದರಿಂದ ನಾಳೆಯಿಂದ ಮನೆ ಮನೆ ತಪಾಸಣೆಗೆ ಚಿಂತನೆ ಮಾಡಲಾಗಿದೆ. ಔಷಧಿಗೂ ಜನ ಹೊರಗೆ ಬರದಂತೆ ತಡೆಯಲು ಯೋಜನೆ ರೂಪಿಸಿದ್ದು, ಎಲ್ಲರ ಮನೆ ಮನೆಗೂ ಹೋಗಿ ಕ್ಲಿನಿಕಲ್ ಸರ್ವೇ, ಬಿಪಿ, ಶುಗರ್, ಜ್ವರ, ನೆಗಡಿ, ಕೆಮ್ಮು ಮುಂದಾವುಗಳಿಗೆ ಚಿಂತಿಸಲಾಗಿದೆ.