ಬೆಂಗಳೂರು : ಜಗತ್ತನ್ನೇ ನಡುಗಿಸುತ್ತಿರುವ ಕೊರೊನಾ ವೈರಸ್‍ಗೆ ರಾಜ್ಯದ ಸಚಿವರೂ ಬೆಚ್ಚಿ ಬಿದ್ದಿದ್ದು, ಏಪ್ರಿಲ್ 15 ರವರೆಗೆ ಎಲ್ಲೂ ಪ್ರವಾಸ ಹೋಗದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕೊರೊನಾ ಆತಂಕದಿಂದ ಮಂತ್ರಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯಾದ್ಯಂತ ಯಾವುದೇ ಭಾಗಕ್ಕೆ ಹೋದರೂ ಸಭೆ ನಡೆಯುತ್ತದೆ. ಹೆಚ್ಚು ಜನ ಸೇರುತ್ತಾರೆ. ಹಾಗೆ ಜನ ಸೇರುವ ಜಾಗವನ್ನು ತಾವೇ ಸೃಷ್ಟಿಸುವುದು ಕೊರೊನಾ ವೈರಸ್‍ಗೆ ಆಹ್ವಾನ ನೀಡಿದಂತೆ ಎಂಬುದು ಸಚಿವರ ಆತಂಕ. ಹೀಗಾಗಿ ಸಾಧ್ಯವಾದಷ್ಟರ ಮಟ್ಟಿಗೆ ಆಯಾ ಜಿಲ್ಲೆಯ ವರದಿಯನ್ನು ಡಿ.ಸಿ.ಗಳಿಂದ ಮತ್ತು ಇಲಾಖೆಯ ಅಧಿಕಾರಿಗಳಿಂದ ಪಡೆದು ಮುಂದಿನ ಕಾರ್ಯಕ್ಕೆ ಆದೇಶ ನೀಡುವುದು ಸಚಿವರ ಇರಾದೆ.
ಈ ಮಧ್ಯೆ ಆರ್ಥಿಕ ಸಂಕಷ್ಟದ ಕಾರಣದಿಂದ ರಾಜ್ಯದೆಲ್ಲೆಡೆ ಜನ ಆತಂಕದಲ್ಲಿದ್ದು, ಸಹಜವಾಗಿಯೇ ಮಂತ್ರಿಗಳು ಪ್ರವಾಸ ಹೋದ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಹೀಗೆ ಜನ ಸೇರುವುದನ್ನು ತಡೆಗಟ್ಟಲು ಯಾರಿಗೂ ಸಾಧ್ಯವಿಲ್ಲ. ಹೀಗಾಗಿ ತಮ್ಮ ಪ್ರವಾಸದಿಂದ ಉದ್ಭವವಾಗಬಹುದಾದ ಸಮಸ್ಯೆಯನ್ನು ತಡೆಗಟ್ಟಲು ತಾವೇ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸಚಿವರು ಬಯಸಿದ್ದಾರೆ.
ಈ ಕುರಿತು ಅಧಿಕೃತವಾಗಿ ಸರ್ಕಾರಿ ಆದೇಶ ಹೊರಡದಿದ್ದರೂ ತಾವೇ ಸ್ವಯಂ ಆಗಿ ರಾಜ್ಯ ಪ್ರವಾಸವನ್ನು ಏಪ್ರಿಲ್ 15 ರವರೆಗೆ ನಿಲ್ಲಿಸಬೇಕು ಎಂಬ ತೀರ್ಮಾನಕ್ಕೆ ಸಚಿವರು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.