ಬೆಂಗಳೂರು : ಕೊರೊನಾ ಸೋಂಕು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿಸುವಂತಹ ಕಾಯಿಲೆ ಎಂದು ಪ್ರತಿಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಕೊರೊನಾ ಅತ್ಯಂತ ಅಪಾಯಕಾರಿ. ಇದು ಯಾರಿಗೆ ಬಂದಿಲ್ಲವೋ ಅವರು ಜಾಗೃತರಾಗಿರಿ. ಬಂದು ವಾಸಿಯಾಗಿರುವವರೂ ಜಾಗರೂಕರಾಗಿರಬೇಕು. ಸಾಮಾಜಿಕ ಬಹಿಷ್ಕಾರದ ರೀತಿ ಈ ರೋಗ ಕಾಡುತ್ತದೆ. ಯಾಕೆಂದರೆ, ಹೆಂಡತಿ, ಮಕ್ಕಳು ನಮ್ಮನ್ನು ನೋಡಲು ಬರುವ ಹಾಗಿಲ್ಲ. ಯಾರ ಜೊತೆಯೂ ಮಾತನಾಡದಂತೆ ಮಾಡುತ್ತದೆ ಎಂದು ಹೇಳಿದರು.
ಸಚಿವ ಜೆ ಸಿ ಮಾಧುಸ್ವಾಮಿ ಅವರಿಗೆ ಕೊರೊನಾ ಬಂದಿಲ್ಲ ಒಳ್ಳೆಯದು. ಬರದಂತೆ ನೋಡಿಕೊಳ್ಳಿ. ಈಶ್ವರಪ್ಪ ಅವರಿಗೆ ಬಂದಿತ್ತೆಂದು ಕಾಣಿಸುತ್ತದೆ. ನನಗೂ ಬಂದಿತ್ತು. ಯಾರೂ ನನ್ನನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಹೆಂಡತಿ ಮಕ್ಕಳೇ ಬರುವಂತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ ಈಶ್ವರಪ್ಪ ನಕ್ಕಾಗ, ಏನಪ್ಪ ಈಶ್ವರಪ್ಪ ನಗ್ತೀಯಾ? ನಾನು ಹೇಳುವುದು ನಿಜ. ನಾನು ಅನುಭವಿಸಿದ್ದೇನೆ. ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರು ಕೊರೊನಾದಿಂದ ಮೃತಪಟ್ಟಾಗ ಅವರ ಹೆಂಡತಿ,ಮಕ್ಕಳು ಸೋಂಕಿನಿಂದಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಈ ಕೊರೊನಾ ಮನುಷ್ಯತ್ವವನ್ನೇ ಬೇರ್ಪಡಿಸುತ್ತದೆ. ಅಂತಹ ಅಪಾಯಕಾರಿ. ಬರದ ಹಾಗೆ ಹುಷಾರಾಗಿ ನೋಡಿಕೊಳ್ಳಿ ಎಂದು ಮನವಿ ಮಾಡಿದರು.
ಈ ಕೊರೊನಾಗೆ ಔಷಧಿ ಇಲ್ಲ, ವ್ಯಾಕ್ಸಿನ್ ಬಂದಿಲ್ಲ. ಹಾಗಾಗಿ, ಹುಷಾರಾಗಿರಬೇಕು. ಮಾಸ್ಕ್ ಕೊರೊನಾಗೆ ಔಷಧಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೊರೊನಾ ಬಂದಾಕ್ಷಣ ಎಲ್ಲರೂ ಸಾಯುತ್ತಾರೆ ಎಂಬ ಆತಂಕ ಬೇಡ. ಕೊರೊನಾ ಬರುತ್ತದೆ ಎಂಬ ಆತಂಕವನ್ನು ಹೊಂದಿರಬಾರದು. ಕೊರೊನಾ ಮರಣ ಪ್ರಮಾಣ ಶೇ.2ರಷ್ಟಿದೆ. ಹಾಗೆಂದು, ಉದಾಸೀನ ಬೇಡ. ಎಲ್ಲರೂ ಎಚ್ಚರಿಕೆಯಿಂದರಬೇಕು ಎಂದರು.
ನಮ್ಮ ಮನೆಯಲ್ಲಿ ನನ್ನ ಮಗ, ಹೆಂಡತಿ, ಕೆಲಸದವರು ಎಲ್ಲರಿಗೂ ಬಂದು ಬಿಟ್ಟಿತು. ಅಡುಗೆ ಮಾಡಲು ಮೈಸೂರಿನಿಂದ ಕೊರೊನಾ ನೆಗೆಟಿವ್ ಇರುವವರನ್ನು ಕರೆಸಬೇಕಾಯಿತು. ಕೊರೊನಾ ಬಗ್ಗೆ ಸದನದಲ್ಲಿ ಮುಂದೆ ಮಾತನಾಡುತ್ತೇನೆ. ಎಲ್ಲರೂ ಎಚ್ಚರಿಕೆವಹಿಸಿ ಎಂದರು. ಇದೇ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕೇಂದ್ರದ ಮಾಜಿ ಸಚಿವ ಎಂ ವಿ ರಾಜಶೇಖರನ್, ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ, ಕವಿ ನಿಸಾರ್ ಅಹ್ಮದ್ ಸೇರಿದಂತೆ ಅಗಲಿದ ಗಣ್ಯರಿಗೆ ಹಾಗೂ ಕೊರೊನಾದಿಂದ ಮೃತಪಟ್ಟ ಜನ ಹಾಗೂ ವಾರಿಯರ್ಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಸಿಎಂ ಸಂತಾಪ : ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಸಹ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಮಾತನಾಡಿದರು. ಅದೇ ರೀತಿ ಕಾಂಗ್ರೆಸ್ ಹಿರಿಯ ನಾಯಕ ಆರ್ ವಿ ದೇಶಪಾಂಡೆ, ಡಿ ಕೆ ಶಿವಕುಮಾರ್, ಯು ಟಿ ಖಾದರ್, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ, ಸಚಿವ ಜೆ ಸಿ ಮಾಧುಸ್ವಾಮಿ ಮತ್ತಿತರರು ಮಾತನಾಡಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.