ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸಾವಿರಾರು ವಲಸೆ ಕಾರ್ಮಿಕರು ತಮ್ಮ ರಾಜ್ಯ, ಜಿಲ್ಲೆಗಳಿಗೆ ತೆರಳಿದ್ದಾರೆ. ಕೊರೊನಾ ಆತಂಕ ಹಾಗೂ ಆಘಾತದಿಂದಾಗಿ ಮಹಾನಗರದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳಲಿದೆ.
ರಾಜ್ಯ ರಾಜಧಾನಿಯಿಂದ ಒಟ್ಟು 6 ಲಕ್ಷಕ್ಕೂ ಅಧಿಕ ಮಂದಿ ತಮ್ಮ ಊರು, ಜಿಲ್ಲೆ, ರಾಜ್ಯಗಳಿಗೆ ತೆರಳಿದ್ದಾರೆ. ಸರ್ಕಾರವೇ ಬಸ್ ಮೂಲಕ 1 ಲಕ್ಷಕ್ಕೂ ಅಧಿಕ ಮಂದಿಯನ್ನು ಕಳುಹಿಸಿಕೊಟ್ಟಿದೆ. ಕೆಲ ಎನ್ಜಿಓಗಳು, ನಿರ್ಮಾಣ ಸಂಸ್ಥೆ ಮಾಲೀಕರು ಕೆಲವು ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಿಕೊಡುವ ಕಾರ್ಯ ಮಾಡಿದ್ದಾರೆ.
ಸದ್ಯ ಬೆಂಗಳೂರು ನಗರದಲ್ಲಿ ಜನವರಿ ವೇಳೆಯಲ್ಲಿ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿದ್ದ ಕಾರ್ಮಿಕರಲ್ಲಿ ಶೇ.70ರಷ್ಟು ಮಂದಿ ನಗರ ಬಿಟ್ಟಿದ್ದಾರೆ. ಸಣ್ಣ ಪುಟ್ಟ ಕಂಪನಿಗಳು ಕೆಲಸ ಇದ್ದರೂ, ಕಾರ್ಮಿಕರಿಲ್ಲದೆ ಒದ್ದಾಡುತ್ತಿವೆ. ಅಲ್ಲದೇ ಸರ್ಕಾರ ಕೂಡ ಎಲ್ಲಾ ಕಾರ್ಮಿಕರನ್ನು ಒಂದೇ ಸಮಯದಲ್ಲಿ ಕೆಲಸಕ್ಕೆ ಇಳಿಸಲು ಪರವಾನಗಿ ನೀಡುತ್ತಿಲ್ಲ. ಸೀಮಿತ ಸಂಖ್ಯೆಯಲ್ಲಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ ಕೆಲಸ ಮಾಡಲು ಸೂಚಿಸಿದೆ. ಆದರೆ ಒಂದಿಷ್ಟು ಮಂದಿ ಕಾರ್ಮಿಕರು ಊರು ಬಿಟ್ಟಿದ್ದು, ಈಗ ಇರುವ ಕೆಲ ಕಾಮಗಾರಿಗಳನ್ನು ಪೂರೈಸಲು ಕೂಡ ಕಾರ್ಮಿಕರ ಕೊರತೆ ಎದುರಾಗಿದೆ.
ಈಗಾಗಲೇ ನಗರದಲ್ಲಿ ಸಣ್ಣಪುಟ್ಟ ಮನೆಗಳ ನಿರ್ಮಾಣದಿಂದ ಬೃಹತ್ ಮಾಲ್, ವಸತಿ ಸಮುಚ್ಛಯಗಳ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈಗ ಸುಮಾರು 6 ಸಾವಿರ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಗತ್ಯ ಕಾರ್ಮಿಕರು ಇಲ್ಲವಾಗಿದೆ. ಇದರಲ್ಲಿ ಕೆಲವು ಸರ್ಕಾರಿ ಕಟ್ಟಡಗಳ ಕಾಮಗಾರಿಗಳಾಗಿದ್ದರೆ, ಮತ್ತೆ ಕೆಲವು ಖಾಸಗಿ ಕಾಮಗಾರಿಗಳಾಗಿವೆ. ರಾಜ್ಯದಲ್ಲಿ ಒಟ್ಟು 20 ಲಕ್ಷ ಕಾರ್ಮಿಕರು ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಕೊಂಡಿದ್ದರು.
ಇವರಲ್ಲಿ ಶೇ.45ರಷ್ಟು ಮಂದಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಇವರಲ್ಲಿ ಶೇ.70ರಷ್ಟು ಮಂದಿ ಸ್ವಂತ ಊರುಗಳಿಗೆ ತೆರಳಿದ್ದಾರೆ. ಇದರಿಂದ ಸುಮಾರು 10 ಕೋಟಿ ರೂ. ಮೊತ್ತದ ನಿರ್ಮಾಣ ಯೋಜನೆಗಳು ಕುಂಟುತ್ತಾ ಸಾಗಿವೆ. ನಿತ್ಯ 800 ರೂಪಾಯಿಯಿಂದ 1000 ರೂಪಾಯಿ ದಿನಗೂಲಿ ಪಡೆಯುತ್ತಿದ್ದ ಪುರುಷ ಕಾರ್ಮಿಕರು ಹಾಗೂ 500 ರೂಪಾಯಿಯಿಂದ 700 ರೂಪಾಯಿ ದಿನಗೂಲಿ ಪಡೆಯುತ್ತಿದ್ದ ಮಹಿಳಾ ಕಾರ್ಮಿಕರು ಜೀವ ಇದ್ದರೆ ಸಾಕು ಎಂಬ ಯೋಚನೆಯಲ್ಲಿ ಬೆಂಗಳೂರು ತೊರೆದಿದ್ದಾರೆ.
ನಿರ್ಮಾಣ ಕ್ಷೇತ್ರ ಚೇತರಿಕೆ ಪಡೆಯಲು ಇನ್ನೂ ಆರೇಳು ತಿಂಗಳು ಬೇಕಾಗಬಹುದು. ವಲಸೆ ಕಾರ್ಮಿಕರು ಸುಮ್ಮನೆ ಹೋಗಿಲ್ಲ, ಹೆದರಿಕೊಂಡು ಊರಿಗೆ ಕಾಲ್ಕಿತ್ತಿದ್ದಾರೆ. ಇವರ ಮನವೊಲಿಸಿ ಕರೆತರುವುದು ಸುಲಭದ ಕೆಲಸವಲ್ಲ. ಇಲ್ಲಿದ್ದವರಿಗೂ ಊಟ, ವಸತಿ ವ್ಯವಸ್ಥೆ ಸರಿಯಾಗಿರಲಿಲ್ಲ ಎನ್ನುತ್ತಾರೆ ಸಿಪಿಐಎಂ ಮುಖಂಡ ಪ್ರಕಾಶ್
ಕ್ರೆಡೈ ಅಧ್ಯಕ್ಷ ಸುರೇಶ್ ಹರಿ, ನೋಟ್ ಬ್ಯಾನ್, ಜಿಎಸ್ಟಿ ಜಾರಿ, ರೇರಾ ಕಾಯ್ದೆ ಜಾರಿಯಿಂದಾಗಿ ಒಂದಿಷ್ಟು ಸಮಯ ರಿಯಲ್ ಎಸ್ಟೇಟ್ ಉದ್ಯಮ ಸಂಕಷ್ಟ ಎದುರಿಸಿತ್ತು. ಆದರೆ ಕೊರೊನಾ ಏಟು ಇದೆಲ್ಲವನ್ನೂ ಮೀರಿದ್ದಾಗಿದೆ. ನಿರ್ಮಾಣ ಮಾಡುವವರ ಕೈಲಿ ಹಣವಿಲ್ಲ, ಇದ್ದವರಿಗೆ ಕಾರ್ಮಿಕರು ಸಿಗುತ್ತಿಲ್ಲ. ಒಟ್ಟಾರೆ ನಮ್ಮ ಕ್ಷೇತ್ರ ಸುಧಾರಿಸಿಕೊಳ್ಳಲು ಸಮಯ ಹಿಡಿಯಲಿದೆ. ಸರ್ಕಾರಕ್ಕೆ ನಾವು ಮನವಿ ಮಾಡಿದ್ದು, ಸ್ಪಂದನೆ ಸಿಕ್ಕಿದೆ. ಸದ್ಯಕ್ಕೆ ಸಿಮೆಂಟ್, ಮರಳು, ಜಲ್ಲಿ ಸಮಸ್ಯೆ ಕೂಡ ಇದ್ದು, ಗಣಿಗಾರಿಕೆ, ಉತ್ಪಾದನಾ ಕ್ಷೇತ್ರಗಳು ಸುಮ್ಮನಾಗಿವೆ. ಇವೆಲ್ಲಾ ಕೂಡ ಸಮಸ್ಯೆಯ ಕೇಂದ್ರವಾಗಿದೆ. ರಿಯಲ್ ಎಸ್ಟೇಟ್ ಉದ್ಯಮ ಚೇತರಿಸಲು ಇನ್ನೂ ಆರೇಳು ತಿಂಗಳ ಕಾಲವಂತೂ ಬೇಕೇ ಬೇಕು ಎನ್ನುತ್ತಾರೆ.