ಬೆಂಗಳೂರು: ಇಂದಿನಿಂದ 3ನೇ ಹಂತದ ವ್ಯಾಕ್ಸಿನೇಷನ್ ಆರಂಭವಾಗಲಿದ್ದು, ಲಸಿಕಾ ಅಭಿಯಾನಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಕೋವಿನ್ ಅಥವಾ ಆರೋಗ್ಯ ಸೇತು ಆ್ಯಪ್ನಲ್ಲಿ ನೋಂದಾಯಿಸಿದ 18 ರಿಂದ 44 ವರ್ಷದ ವಯಸ್ಸಿನವರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ.
ರಾಜ್ಯದಲ್ಲಿ 18 ರಿಂದ 44 ವರ್ಷದವರ ಜನಸಂಖ್ಯೆ 3.26 ಕೋಟಿ ಇದೆ. ಒಟ್ಟು ಅಂದಾಜು ಲಸಿಕೆ ಪ್ರಮಾಣವು 6.52 ಕೋಟಿಯಾಗಿದೆ. ಲಸಿಕೆ ಹಾಕಲು 2 ಕೋಟಿ ಡೋಸ್ ಕೋವಿಶೀಲ್ಡ್ ಮತ್ತು 1 ಕೋಟಿ ಕೋವ್ಯಾಕ್ಸಿನ್‌ಗೆ ಆರಂಭಿಕ ಆದೇಶವನ್ನು ನೀಡಲಾಗಿದೆ.
ಆರಂಭದಲ್ಲಿ ಬೆಂಗಳೂರಿನ ಎಲ್ಲಾ ಪ್ರಮುಖ ಆಸ್ಪತ್ರೆಗಳಾದ ಕೆಸಿಜಿ, ಜಯನಗರ ಜನರಲ್ ಆಸ್ಪತ್ರೆ, ಸಿ.ವಿ. ರಾಮನ್ ಜನರಲ್ ಆಸ್ಪತ್ರೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳಾದ ಇಎಸ್‌ಐ ಆಸ್ಪತ್ರೆಗಳು ಮತ್ತು ನಿಮ್ಹಾನ್ಸ್ ಗಳಲ್ಲಿ ಲಸಿಕೆ ನೀಡಲಾಗುತ್ತೆ. ಇತರೆ ಜಿಲ್ಲೆಗಳಲ್ಲಿ ಜಿಲ್ಲಾ ಆಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲು ಯೋಜಿಸಲಾಗಿದೆ.
ಇನ್ನು 44 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಉಚಿತವಾಗಿ ಲಸಿಕೆ ನೀಡುತ್ತಿದ್ದು, ಎಲ್ಲಾ ಸರ್ಕಾರಿ ಕೋವಿಡ್-19 ಲಸಿಕಾ ಕೇಂದ್ರದಲ್ಲಿ ಉಚಿತವಾಗಿ ಪಡೆಯಬಹುದಾಗಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಇಲ್ಲಿಯವರೆಗೆ ರಾಜ್ಯವು 6.5 ಲಕ್ಷ ಡೋಸ್ ಕೋವಿಶೀಲ್ಡ್ ಅನ್ನು ಸ್ವೀಕರಿಸಿದೆ. ತಯಾರಕರ ಮಾಹಿತಿಯ ಪ್ರಕಾರ ಮೇ 2 ಅಥವಾ 3 ನೇ ವಾರದ ನಂತರ ಲಸಿಕೆಗಳ ಮುಂದಿನ ಹಂತವನ್ನು ಸ್ವೀಕರಿಸುವ ನಿರೀಕ್ಷೆಯಿದೆ.