ಬೆಂಗಳೂರು: ರೌಡಿ ಪತ್ನಿ ಜೊತೆ ಮತ್ತೋರ್ವ ರೌಡಿಶೀಟರ್ ಅಕ್ರಮ ಸಂಬಂಧ ಹೊಂದಿದ್ದ ಶಂಕೆಯ ಮೇರೆಗೆ ಆತನನ್ನು ಮಾರಕಾಸ್ತ್ರಗಳಿಂದ ಕೊಲೆಗೈದು ತಲೆಮರೆಸಿಕೊಂಡಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿ ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಸಲೀಂ ಬಂಧಿತ ಆರೋಪಿ. ಈತನನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಲೀಂ ಬಂಧನದ ವೇಳೆ ಕಾನ್ಸ್ಟೇಬಲ್ ಹಂಸ ಬೀಳಗಿ ಎಂಬುವವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಗಾಗಿ ತಲಾಶ್ ನಡೆಸುತ್ತಿದ್ದರು. ಗೋವಿಂದಪುರ ಬಳಿ ಆರೋಪಿ ಮೊಹಮ್ಮದ್ ಸಲೀಂ ಅಡಗಿಕೊಂಡಿರುವುದನ್ನರಿತ ಪಿಎಸ್ಐ ಇಮ್ರಾನ್ ನೇತೃತ್ವದ ತಂಡ, ಸ್ಥಳಕ್ಕೆ ತೆರಳಿ ಬಂಧಿಸಿಲು ಯತ್ನಿಸಿದ ವೇಳೆ ಸಲೀಂ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಜೀವ ರಕ್ಷಣೆಗಾಗಿ ಪಿಎಸ್ಐ ಗಾಳಿಯಲ್ಲಿ ಗುಂಡು ಹಾರಿಸಿ, ನಂತರ ಆರೋಪಿ ಕಾಲಿಗೆ ಫೈರಿಂಗ್ ಮಾಡಿದ್ದಾರೆ.
ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸರಿಂದ ಗುಂಡೇಟು ತಿಂದು ಜೈಲು ಸೇರಿದ್ದ ರೌಡಿಶೀಟರ್ ಅನೀಸ್ ಅಹಮದ್ ಪತ್ನಿ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಆರೋಪದಡಿ ಜೂ. 22ರಂದು ಮತ್ತೋರ್ವ ರೌಡಿಶೀಟರ್ ಸೈಯದ್ ಕರೀಂನನ್ನು ಮೊಹಮ್ಮದ್ ಸಲೀಂ ಹಾಗೂ ಆತನ ಸಹಚರರು ಗೋವಿಂದಪುರ ಬಳಿಯ ನಿರ್ಜನ ಪ್ರದೇಶ ಬಳಿ ಹತ್ಯೆಗೈದಿದ್ದರು. ಮೃತ ಕರೀಂ, ಭೂಗತಪಾತಕಿಯಾಗಿದ್ದ ರಶೀದ್ ಮಲಬಾರಿ ಜೊತೆ ಗುರುತಿಸಿಕೊಂಡಿದ್ದ.
ಇದನ್ನೂ ಓದಿ: ಪತಿ ಜೈಲಲ್ಲಿ, ಪತ್ನಿ ಇನ್ನೊಬ್ಬನ ತೆಕ್ಕೆಯಲ್ಲಿ.. ಬೆಂಗಳೂರಲ್ಲಿ ಬಿತ್ತು ರೌಡಿಶೀಟರ್ ಕರೀಂ ಹೆಣ