ಬೆಂಗಳೂರು: ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ನೆನೆಗುದಿಗೆ ಬಿದ್ದಿದ್ದ ಶಾಸಕರಿಗಾಗಿ ಕಾನ್ಸ್ಟಿಟ್ಯೂಷನಲ್ ಕ್ಲಬ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹೆಜ್ಜೆ ಇಡುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಶಾಸಕರಿಗಾಗಿ ಕ್ಲಬ್ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಕ್ಲಬ್ ನಿರ್ಮಾಣ ಸಂಬಂಧ ಸೋಮವಾರ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಸ್ಪೀಕರ್ ನೇತೃತ್ವದಲ್ಲಿ ನಡೆದ ಕರ್ನಾಟಕ ವಿಧಾನ ಮಂಡಲ ಆಡಳಿತ ಮಂಡಳಿ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಇಂಧನ ಸಚಿವ ಸುನೀಲ್ ಕುಮಾರ್, ಶಾಸಕ ಹ್ಯಾರೀಸ್, ಸಾ.ರಾ. ಮಹೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಭಾಗಿಯಾಗಿದ್ದರು.
ಸಭೆಯಲ್ಲಿ ಕ್ಲಬ್ ರಚನೆ ಸಂಬಂಧಪಟ್ಟಂತೆ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಕ್ಲಬ್ ರಚನೆಗೆ ಸಭೆಯಲ್ಲಿ ಸಹಮತದ ನಿರ್ಧಾರ ಮಾಡಿದ್ದು, ಸ್ಥಳ ಗುರುತಿಸುವಿಕೆಗೆ ಸೂಚನೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿದುಬಂದಿದೆ.
ಬಾಲಬ್ರೂಯಿ ಅತಿಥಿಗೃಹ, ಸಿಐಡಿ ಕಚೇರಿ ಇರುವ ಕಾರ್ಲಟನ್ ಸೇರಿದಂತೆ ಇತರೆ ಸ್ಥಳಗಳಲ್ಲಿ ಶಾಸಕರ ಕ್ಲಬ್ ನಿರ್ಮಿಸಲು ಚಿಂತನೆ ನಡೆಸಲಾಗಿತ್ತು ಅದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕುಮಾರಕೃಪಾ ಅತಿಥಿಗೃಹದ ಸಮೀಪದಲ್ಲಿರುವ ಸರ್ಕಾರಿ ಡಿ ಗ್ರೂಪ್ ನೌಕರರ ಕ್ವಾರ್ಟರ್ಸ್ ಜಾಗದ ಹೆಸರು ಕೇಳಿಬಂದಿತ್ತು.
ಈಗ ಈ ಸಂಬಂಧ ಚರ್ಚೆ ನಡೆದಿದ್ದು, ಸಭೆಯ ನಿರ್ಣಯದ ಮಾಹಿತಿಯನ್ನು ಗೌಪ್ಯವಾಗಿರಿಸಲಾಗಿದೆ. ಅಧಿವೇಶನದ ಕಾರಣಕ್ಕೆ ಸದನದಲ್ಲೇ ಈ ಬಗ್ಗೆ ಹೇಳಿಕೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ರೈಲು ಅಪಘಾತ, ಮೂರು ಭಾಗಗಳಾದ ಟಿಪ್ಪರ್..