ಬೆಂಗಳೂರು: ಕೊರೊನಾ ಇಲ್ಲದಿದ್ದಾಗ ಕರ್ಫ್ಯೂ ಹಾಕ್ತಾರೆ, ಸೋಂಕು ವ್ಯಾಪಕವಾದಾಗ ನಿರ್ಬಂಧ ತೆರವು ಮಾಡುತ್ತಾರೆ. ಇದು ರಾಜ್ಯ ಸರ್ಕಾರ ಕೋವಿಡ್ ಬಗ್ಗೆ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸರ್ಕಾರದ ನಿರ್ಧಾರದ ವಿರುದ್ಧ ಹರಿಹಾಯ್ದಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ಕೋವಿಡ್ ಮೂರನೇ ಅಲೆ ಆರಂಭವಾಗಿದೆ. ಮೊದಲ ಅಲೆಯ ಆರಂಭದಲ್ಲಿ ಸರ್ಕಾರ ಸಂಪೂರ್ಣವಾಗಿ ಎಡವಿತ್ತು. ನಂತರ ಎಚ್ಚೆತ್ತುಕೊಂಡು ನಿಭಾಯಿಸಿತ್ತು. ಎರಡನೇ ಅಲೆಯಲ್ಲಿ ಗೊತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದ್ದವು ಎಂದು ಟೀಕಿಸಿದರು.
ಮೂರನೇ ಅಲೆ ಮಾರಣಾಂತಿಕವಲ್ಲವಾದರೂ ತಜ್ಞರ ಅಭಿಪ್ರಾಯದಂತೆ ವೇಗವಾಗಿ ಹರಡಿದೆ. ಮರಣ ಪ್ರಮಾಣ ಶೇ.0.04ನಷ್ಟಿದೆ. ಕೋವಿಡ್ ಸೋಂಕು ಹೆಚ್ಚಿದ್ದರೂ ಜ.21ಕ್ಕೆ 3,23,143 ಸಕ್ರಿಯ ಪ್ರಕರಣಗಳಿವೆ. ಕಳೆದ 10 ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗಿರುವವರ ಸಂಖ್ಯೆ ಕೇವಲ 2258 ಮಾತ್ರ. ಅಂದರೆ 3.21 ಲಕ್ಷ ಸಕ್ರಿಯ ಪ್ರಕರಣಗಳು ಆಸ್ಪತ್ರೆಯಿಂದ ಹೊರಗಿದ್ದಾರೆ. ಬೆಂಗಳೂರಿನಲ್ಲಿ 1,51,022 ಲಕ್ಷ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಅತ್ಮನಿರ್ಭರ ಪ್ಯಾಕೇಜ್ ಯಾರಿಗೆ ತಲುಪಿದೆ? ಕೇಂದ್ರದ ಹಣಕಾಸು ಸಚಿವರು 20 ಲಕ್ಷ ಕೋಟಿ ಆತ್ಮನಿರ್ಭರ ಪ್ಯಾಕೇಜ್ ಘೋಷಿಸಿದರು. ಅದರಿಂದ ಯಾರಿಗೆ ಉಪಯೋಗವಾಯ್ತು? ಬೀದಿಬದಿ ವ್ಯಾಪಾರಿಗಳಿಗೆ 2 ಸಾವಿರ, ಅಸಂಘಟಿತ ಕಾರ್ಮಿಕರಿಗೆ 2 ಸಾವಿರ, ಆಟೋ- ಟ್ಯಾಕ್ಸಿ ಚಾಲಕರಿಗೆ 3 ಸಾವಿರ, ಕಟ್ಟಡ ಕಾರ್ಮಿಕರಿಗೆ 3 ಸಾವಿರ ಪರಿಹಾರ ಘೋಷಿಸಿದರು. ಆದರೆ ಕೇವಲ ಶೇ.7ರಷ್ಟು ಜನರಿಗೆ ಮಾತ್ರ ಈ ಪರಿಹಾರ ತಲುಪಿದೆ ಎಂದು ಮಾಹಿತಿ ನೀಡಿದರು.
ಐಸಿಎಂಆರ್ ಪ್ರಕಾರ ಮೃತಪಟ್ಟಿರುವ 37 ಸಾವಿರ ಜನರಲ್ಲಿ ಶೇ.5ರಷ್ಟು ಜನರಿಗೆ ಮಾತ್ರ ಪರಿಹಾರ. ರಾಜ್ಯದಲ್ಲಿ ಈಗ ಹೋಮ್ ಐಸೋಲೇಶನ್ನಲ್ಲಿ ಹೆಚ್ಚು ಸೋಂಕಿತರಿದ್ದು, 10 ದಿನಗಳಲ್ಲಿ ಕೇವಲ 2258 ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಪರೀಕ್ಷೆ ಮಾಡಿಸಿದರೆ ಎರಡು ಮೂರು ದಿನವಾದರೂ ಫಲಿತಾಂಶ ನೀಡುವುದಿಲ್ಲ ಎಂದು ದೂರಿದರು.
ಮೇಕೆದಾಟು ಯೋಜನೆ ಜಾರಿಯಾದ್ರೆ ಸಾಕು: ಮುಖ್ಯಮಂತ್ರಿಗಳು ಅಂತಾರಾಜ್ಯ ಜಲ ವಿವಾದಕ್ಕೆ ಸಂಬಂಧಿಸಿದ ಕಾನೂನು ಬದಲಾವಣೆ ಹೇಳಿಕೆಗೆ ಪ್ರತಿಕ್ರಿಯಿಸಿ, ನಮಗೆ ಮೇಕೆದಾಟು ಯೋಜನೆ ಆದರೆ ಸಾಕು. ಅದನ್ನು ಮಾಡಿದರೆ ಸಂತೋಷ. ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಎರಡೂವರೆ ಕೋಟಿ ಜನರಿಗೆ ಕುಡಿಯುವ ನೀರು ಸಿಗುತ್ತದೆ ಎಂದು ನಮ್ಮ ಹೋರಾಟ ನಡೆಯುತ್ತಿದೆ. ಕೇಂದ್ರದಲ್ಲಿ ಅವರದೇ ಸರ್ಕಾರವಿದೆ. ಅವರೇ ಅನುಮೋದನೆ ಪಡೆದು ಯೋಜನೆ ಆರಂಭಿಸಲಿ ಎಂದರು.
ಪಾದಯಾತ್ರೆ ನಿಲ್ಲಿಸಲು ವೀಕೆಂಟ್ ಕರ್ಫ್ಯೂ ಜಾರಿ ಮಾಡಿದರೇ ಎಂಬ ಪ್ರಶ್ನೆಗೆ, ‘ಪಾದಯಾತ್ರೆಯನ್ನು ನಿಲ್ಲಿಸಬೇಕು ಎಂಬ ಉದ್ದೇಶದಿಂದಲೇ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿತು. ನಾವು ಹೋರಾಟ ಮಾಡುತ್ತೇವೆ ಎಂದು ಅವರಿಗೆ ಗೊತ್ತಿತ್ತು. ಆಗ ನಮ್ಮ ಪಕ್ಷದ ಮುಖಂಡರು, ಜೆಡಿಎಸ್ ಹಾಗೂ ಇತರೆ ಪಕ್ಷಗಳ ಮುಖಂಡರನ್ನು ಕರೆದು, ರಾಜ್ಯದ ಜನರ ಹಿತಾಸಕ್ತಿ ನಾವೆಲ್ಲ ಒಟ್ಟಾಗಿ ಹೋರಾಡೋಣ ಎಂದು ಹೇಳಬಹುದಿತ್ತಲ್ಲ ಎಂದು ಮರು ಪ್ರಶ್ನಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಸಹ ಸಂಚಾಲಕರಾದ ರಾಮಚಂದ್ರಪ್ಪ, ಪ್ರಚಾರ ಸಮಿತಿ ಮುಖ್ಯಸ್ಥ ಮನೋಹರ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಸುರಂಗ ಕೊರೆದು ಹೊರ ಬಂದ ವಾಮಿಕ ಯಂತ್ರ: ಚುರುಕು ಪಡೆದ ನಮ್ಮ ಮೆಟ್ರೋ ಕಾಮಗಾರಿ