ಬೆಂಗಳೂರು : ಕಾಂಗ್ರೆಸ್ ನಾಯಕರು ತಮ್ಮ ಹಠ ತೊರೆದು ಕೊರೊನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಸರ್ಕಾರದ ಜೊತೆಗೆ ಸಹಕರಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ಉಲ್ಬಣವಾಗುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ತೆಗೆದುಕೊಂಡ ನಿರ್ಬಂಧಗಳನ್ನು ಬೆಂಬಲಿಸಿ, ಸಹಕರಿಸಬೇಕು ಎಂದರು.
ಮೇಕೆದಾಟು ಯೋಜನೆ ಸಂಬಂಧ ಇರುವ ವಿವಾದ ಅತ್ಯುಚ್ಛ ನ್ಯಾಯಾಲಯದ ಅಂಗಳದಲ್ಲಿದೆ. ಕಾಂಗ್ರೆಸ್ನವರು ಸರ್ಕಾರ ನಡೆಸಿದವರು. ಜವಾಬ್ದಾರಿಯಿಂದ ವರ್ತಿಸಬೇಕು. ಅನಾರೋಗ್ಯ ಬಂದ ಮೇಲೆ ಸಮಸ್ಯೆ ಎದುರಿಸುವುದಕ್ಕಿಂತ ಬಾರದಂತೆ ತಡೆಯುವುದು ಉತ್ತಮ. 'ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಪ್ರೇರಿತ' ಎಂದರು.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ಪ್ರಾರಂಭಿಸುವ ಮುನ್ನ ಮನೆ ದೇವರಿಗೆ ಪೂಜೆ ಸಲ್ಲಿಸಿದ ಡಿಕೆಶಿ ಕುಟುಂಬ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ವಾರಾಂತ್ಯ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿಗೆ ಪೊಲೀಸರು ಅತ್ಯಂತ ಸಹನೆಯಿಂದ ವರ್ತಿಸಬೇಕು. ಸಾರ್ವಜನಿಕರೂ ಸರ್ಕಾರದ ಜತೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಕಾನೂನನ್ನು ಉಲ್ಲಂಘಿಸಿದವರ ವಿರುದ್ಧ ಪ್ರಕೃತಿ ವಿಕೋಪ ತಡೆ ಕಾಯ್ದೆಯಡಿ ಕ್ರಮತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.