ಬೆಂಗಳೂರು: ಟ್ರಾನ್ಸ್ ಫಾರ್ಮರ್ ಸ್ಫೋಟದಿಂದ ಮೃತಪಟ್ಟ ಮಂಗನಹಳ್ಳಿ ಗ್ರಾಮದ ತಂದೆ ಮಗಳ ಕುಟುಂಬಕ್ಕೆ 20 ಲಕ್ಷ ರೂ.ಗಳ ಪರಿಹಾರ ನೀಡಲಾಗುತ್ತದೆ. ಮತ್ತು ಅಪಾಯಕಾರಿ ಟ್ರಾನ್ಸ್ ಫಾರ್ಮರ್ಗಳ ಆಡಿಟ್ಗೆ ಸೂಚನೆ ನೀಡಲಾಗುತ್ತದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಮಂಗನಹಳ್ಳಿ ಘಟನೆ ದುರದೃಷ್ಟಕರ. ಟ್ರಾನ್ಸ್ ಫಾರ್ಮರ್ ಸ್ಫೋಟದಿಂದ ತಂದೆ ಮಗಳು ಮೃತಪಟ್ಟಿದ್ದಾರೆ. ಆಯಿಲ್ ಲೀಕ್ ಆಗಿ ಟಿಸಿ ಬ್ಲಾಸ್ಟ್ ಆಗಿದೆ. ಈ ಸಂಬಂಧ ನಮಗೆ 12.50ಕ್ಕೆ ದೂರು ಬಂದಿತ್ತು. 1912 ಗೆ ಕರೆ ಮಾಡಿದ್ದ ಸಾರ್ವಜನಿಕರು ಟಿಸಿಯಲ್ಲಿ ಹೊಗೆಯಾಡುತ್ತಿದೆ ಎಂದು ತಿಳಿಸಿದ್ದರು.
ಕೂಡಲೇ ನಮ್ಮ ಸಿಬ್ಬಂದಿ ಟಿಸಿ ದುರಸ್ತಿ ಮಾಡಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ. ಆದರೆ, ಮಧ್ಯಾಹ್ನ 3.10 ಕ್ಕೆ ಇದು ಸ್ಟೋಟಗೊಂಡಿದೆ. ಇಂತಹ ಘಟನೆ ವೇಳೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ತಲಾ 10 ಲಕ್ಷ ರೂ.ನಂತೆ ಪರಿಹಾರ ಘೋಷಣೆ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ: ಛತ್ರ ಬುಕ್ ಮಾಡಿ ಬರುತ್ತಿದ್ದಾಗಲೇ ಟ್ರಾನ್ಸ್ಫಾರ್ಮರ್ ಸ್ಫೋಟ: ಚಿಕಿತ್ಸೆ ಫಲಿಸದೇ ಅಪ್ಪ, ಮಗಳು ಸಾವು
ಇಂತಹ ಘಟನೆ ಆಗಬಾರದಿತ್ತು, ಆದರೆ ಆಗಿದೆ. ಇನ್ಮುಂದೆ ಇಂತಹ ಘಟನೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ದುರಸ್ತಿಗೆ ಬಂದಿರುವ ಟಿಸಿ ಆಡಿಟ್ ಮಾಡಲು ಸೂಚನೆ ನೀಡಿದ್ದೇನೆ. 15 ವರ್ಷಕ್ಕಿಂತ ಹಳೆಯ ಟಿಸಿ ಪಾದಚಾರಿ ಮಾರ್ಗದಲ್ಲಿರುವುದು ಮತ್ತು ಅಪಾಯಕಾರಿ ಟಿಸಿ ಬಗ್ಗೆಯೂ ಆಡಿಟ್ ಮಾಡಲಾಗುತ್ತದೆ. ಆಡಿಟ್ ವರದಿ ನೋಡಿ ಟಿಸಿ ಬದಲಾವಣೆ ಕುರಿತು ಕ್ರಮ ವಹಿಸಲಾಗುತ್ತದೆ. ಹಾಗೆಯೇ ನಿನ್ನೆಯ ಘಟನೆ ಕುರಿತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಎಂಡಿ ಜೊತೆ ಮಾತನಾಡಲಾಗುತ್ತದೆ ಎಂದರು