ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಸರ್ಕಾರದಿಂದ ಲಾಕ್ಡೌನ್ ಮಾಡುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯಂತೆ ಉಳಿದ ಜಿಲ್ಲೆಗಳ ಲಾಕ್ಡೌನ್ ಬಗ್ಗೆ ತೀರ್ಮಾನ ಮಾಡುವ ಸಾಧ್ಯತೆ ಇದೆ.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ 11 ಜಿಲ್ಲೆಗಳ ಡಿಸಿ, ಸಿಇಒ, ಎಸ್ಪಿಗಳ ಜೊತೆ ಸಿಎಂ ಬಿ.ಎಸ್ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಕಲಬುರಗಿ, ಮಂಗಳೂರು, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ರಾಯಚೂರು ಹಾಗೂ ಗದಗ ಜಿಲ್ಲೆಗಳ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಸಿಇಒಗಳು, ಎಸ್ಪಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದಾರೆ.
ಕೊರೊನಾ ವೈರಸ್, ಮಳೆ ಪರಿಸ್ಥಿತಿ ಮತ್ತು ನೀರಾವರಿ ಯೋಜನೆಗಳ ವಿಷಯಗಳಿಗೆ ಸಂಬಂಧಿಸಿದಂತೆ ಇನ್ನಿತರ ವಸ್ತುಸ್ಥಿತಿಗಳ ಬಗ್ಗೆ ಸಿಎಂ ಚರ್ಚೆ ನಡೆಸುತ್ತಿದ್ದಾರೆ. ಸೋಂಕು ಹೆಚ್ಚಿರುವ ಈ ಜಿಲ್ಲೆಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿರುವ ಸಿಎಂ, ಈಗ ಜಾರಿ ಮಾಡಿರುವ ಕ್ರಮದಿಂದ ಸೋಂಕು ತಡೆಯಲು ಸಾಧ್ಯವೇ ಎಂಬುದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಒಂದು ವೇಳೆ, ಈ ಕ್ರಮಗಳು ಸಾಲದು ಎಂದರೆ ಲಾಕ್ಡೌನ್ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ. ಹಾಗಾಗಿ, ಅಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯಂತೆ ಉಳಿದ ಜಿಲ್ಲೆಗಳ ಲಾಕ್ಡೌನ್ ಬಗ್ಗೆ ತೀರ್ಮಾನ ಮಾಡುವ ಸಾಧ್ಯತೆ ಇದೆ. ಮೊದಲು ಸೋಂಕು ಹೆಚ್ಚಿರುವ ಜಿಲ್ಲೆಗಳ ಜೊತೆ ಸಂವಾದ ನಡೆಸುತ್ತಿರುವ ಸಿಎಂ, ಆ ಬಳಿಕ ಸೋಂಕು ಕಡಿಮೆ ಇರುವ ಜಿಲ್ಲೆಗಳ ಜೊತೆ ಸಂವಾದ ನಡೆಸಲಿದ್ದಾರೆ. ಸದ್ಯ ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಲಾಕ್ಡೌನ್ ತೀರ್ಮಾನ ಆಗಿದೆ. ಹೀಗಾಗಿ ಉಳಿದ 9 ಜಿಲ್ಲೆಗಳಲ್ಲೂ ಲಾಕ್ಡೌನ್ ಬಗ್ಗೆ ತೀರ್ಮಾನ ಸಾಧ್ಯತೆ ಇದೆ. ಹಾಗಾಗಿ, ಇಂದಿನ ಸಿಎಂ ಬಿಎಸ್ವೈ ವಿಡಿಯೋ ಕಾನ್ಫರೆನ್ಸ್ ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಸಚಿವರಾದ ಆರ್. ಅಶೋಕ್, ಡಾ.ಸುಧಾಕರ್, ಡಾ. ಅಶ್ವಥ್ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.