ಬೆಂಗಳೂರು : ಸಿಎಂ ಯಡಿಯೂರಪ್ಪ ದಣಿವರಿಯದೆ ಕೆಲಸ ಮಾಡಿದ್ದಕ್ಕೆ ಬೆಳಗಾವಿ ಮತ್ತು ಬಸವಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್‌ನ ಅಪಪ್ರಚಾರದಿಂದ ಸೋಲಾಗಿದೆ. ಸೋಲು ಸೋಲೇ, ಜನತೆಯ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿದರು.
ಓದಿ: ಬಿಎಸ್ವೈಗೆ ಡಬಲ್ ರಿಲೀಫ್ ನೀಡಿದ ಉಪ ಚುನಾವಣಾ ಫಲಿತಾಂಶ: ಸಿಎಂ ಕುರ್ಚಿ ಸುಭದ್ರ
ಸಿಎಂ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸುರೇಶ್ ಅಂಗಡಿ ಪತ್ನಿ ಮಂಗಳ ಅಭ್ಯರ್ಥಿ ಆಗಿದ್ದರು. ಉತ್ತಮ ಹೋರಾಟ ಮಾಡಿ ಗೆಲುವು ಪಡೆದಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಪ್ರಶ್ನೆ ಮಾಡುತ್ತೇನೆ, ನಿಮ್ಮ ಅಸ್ಥಿತ್ವ ಎಲ್ಲಿದೆ?. ಮಸ್ಕಿ ಬಿಟ್ಟರೆ, ಬೇರೆ ಯಾವ ರಾಜ್ಯದಲ್ಲಿದೆ.? ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಅಭ್ಯರ್ಥಿ ಆಗಿದ್ದಕ್ಕೆ ಇಷ್ಟು ಮತ ಬಂತು. ಅದು ಕಾಂಗ್ರೆಸ್ ಪಡೆದ ಮತ ಅಲ್ಲ ಎಂದರು.
ಬಸವಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಉತ್ತಮ ಮತ ಪಡೆದು ಗೆದ್ದಿದ್ದಾರೆ. ಸಿಎಂ ಯಡಿಯೂರಪ್ಪ ಅವರು ದಣಿವರಿಯದೆ ಓಡಾಟ ನಡೆಸಿದ್ದರು. ಹಾಗಾಗಿ, ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ, ಬೆಳಗಾವಿ ಮತ್ತು ಬಸವ ಕಲ್ಯಾಣ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮಸ್ಕಿಯಲ್ಲಿ ಪ್ರತಾಪ್ ಗೌಡ ಪಾಟೀಲ್ ಸೋಲಿನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಮಸ್ಕಿಯಲ್ಲಿ ನಮ್ಮ ಅಭ್ಯರ್ಥಿಗೆ ಜನರ ಜೊತೆ ಸಂಪರ್ಕ ಕಡಿಮೆ ಇತ್ತು. ಅವರು ಸಾತ್ವಿಕ ಸ್ವಭಾವದ ಮನುಷ್ಯ. ಸಿದ್ದರಾಮಯ್ಯ ಮತ್ತು ಡಿಕೆಶಿ, ಪ್ರತಾಪ್ ಗೌಡ ಪಾಟೀಲ್ ಬಿಜೆಪಿಗೆ ಮಾರಾಟ ಆಗಿದ್ದಾರೆ ಅಂತ ಮಾತನಾಡಿದರು.
ಫೈವ್ ಎ ಚಾನಲ್‌ನಿಂದ ನೀರು ಕೊಡ್ತೀವಿ ಅಂತ ಸುಳ್ಳು ಹೇಳಿದರು. ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದ್ದರು. ಇದರಿಂದ ನಮಗೆ ಸೋಲಾಗಿದೆ. ಈಗ ಅಲ್ಲಿ ಭರವಸೆ ಕೊಟ್ಟಿದ್ದೀರಾ, ಅದರಂತೆ ನೀರು ಕೊಡಿ ಎಂದರು.
ನನ್ನ ಸೋಲಿಗೆ ನಮ್ಮವರೇ ಕಾರಣ ಅಂತ ಪ್ರತಾಪ್ ಗೌಡ ಪಾಟೀಲ್ ಆರೋಪ ಮಾಡಿದ್ದರ ಕುರಿತು ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಸೋತಾಗ ಬೇರೆಯವರ ಬಗ್ಗೆ ಆರೋಪ ಮಾಡುವ ಬದಲು ಏಕೆ ಸೋಲಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಇನ್ನೆರಡು ವರ್ಷದಲ್ಲಿ ಮತ್ತೆ ಚುನಾವಣೆ ಬರಲಿದೆ, ಅಲ್ಲಿಯವರೆಗೂ ಜನರ ಬಳಿ ಇದ್ದು ಕೆಲಸ ಮಾಡಲಿ. ನಾವು ಅವರ ಜೊತೆಯಲ್ಲಿ ಇದ್ದೇವೆ, ಪಕ್ಷದ ನಾಯಕರಿದ್ದಾರೆ ಎಂದರು.