ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಸರ್ಕಾರ ಉಳಿಸಿಕೊಳ್ಳಲು ಕುತಂತ್ರ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಗುತ್ತಿಗೆದಾರರ ಬಳಿ ಹಣ ಮಾಡುವುದು, ವರ್ಗಾವಣೆಯಲ್ಲಿ ಹಣ ತೆಗೆದುಕೊಳ್ಳುವ ವಿಚಾರ ರಾಜ್ಯದ ಜನರಿಗೆ ಗೊತ್ತಿದೆ ಎಂದು ಶ್ರೀರಾಮುಲು ದೂರಿದ್ದಾರೆ. ಜನರು ಬಿಜೆಪಿಗೆ 105 ಸ್ಥಾನ ಕೊಟ್ಟಿದ್ದಾರೆ. ಇವತ್ತು 15 ಶಾಸಕರು ರಾಜೀನಾಮೆ ನೀಡಿ ಸರ್ಕಾರ ಬೇಡ ಅಂದಿದ್ದಾರೆ. ಆದರೂ ಅವರು ಅಧಿಕಾರದಲ್ಲಿ ಮುಂದುವರಿದಿದ್ದಾರೆ ಅಂದ್ರೆ ಅವರಿಗೆ ಅಧಿಕಾರದ ಲಾಲಸೆ ಇದೆ. ನಾವು ಅವರಲ್ಲಿ ಖುರ್ಚಿ ಖಾಲಿ ಮಾಡಿ ಅಂತ ಕೇಳುತ್ತೇವೆ ಎಂದರು.
ನಿನ್ನೆ ಓರ್ವ ಸಚಿವರು ನಮ್ಮ ನಾಯಕರು ಮತ್ತು ಈಶ್ವರಪ್ಪ ಅವರನ್ನು ಭೇಟಿ ಮಾಡಿ ವದಂತಿ ಸೃಷ್ಟಿಸಿದ್ದಾರೆ. ಅವರೇ ಮಿಡಿಯಾದವರಿಗೆ ಆಫ್ ದಿ ರೆಕಾರ್ಡ್ ಬಿಜೆಪಿ ಜೊತೆ ಸರ್ಕಾರ ಮಾಡುತ್ತೇವೆ ಅಂತ ಸುದ್ದಿ ಹಬ್ಬಿಸಿದ್ದಾರೆ. ಆದ್ರೆ ಅವರ ಯಾವ ಕುತಂತ್ರವೂ ನಡೆಯುವುದಿಲ್ಲ. ಅವರು ಕೀಳು ಮಟ್ಟಕ್ಕೆ ಇಳಿದು ರಾಜಕಾರಣ ಮಾಡುತ್ತಿದ್ದಾರೆ ಎಂದು ಶ್ರೀರಾಮುಲು ಕಿಡಿಕಾರಿದರು.
ಶ್ರೀರಾಮುಲುರಿಂದ ಪಾಠ ಕಲಿಯುತ್ತೇನೆ: ಇದೇ ವೇಳೆ ಸಚಿವ ಡಿ ಕೆ ಶಿವಕುಮಾರ್ ಮಾತನಾಡಿ, ಶ್ರೀರಾಮುಲು ಅಣ್ಣ ನನಗೆ ಶನಿ. ಅಲ್ಲ ಶಕುನಿ ಅಂದಿದ್ದರು. ರಾಮನ ಹೆಸರಲ್ಲಿ ಶ್ರೀರಾಮುಲು ಬಳಿ ಪಾಠ ಕಲಿಯುತ್ತೇನೆ. ಶ್ರೀರಾಮುಲು ನಮ್ಮಣ್ಣ. ಯಾರಿಗೆ ಜಾಸ್ತಿ ಪ್ರೀತಿ ಇದೆಯೋ, ಅವರು ಅಗಾಗ ನೆನೆಸಿಕೊಳ್ಳುತ್ತಾರೆ. ಸ್ಪೀಕರ್ ಅವರಿಗಿಂತಲೂ ಹೆಚ್ಚು ತಿಳಿದಿರುವ ಶ್ರೀರಾಮುಲು ಅವರಿಂದ ಪಾಠ ಕಲಿತುಕೊಳ್ಳುತ್ತೇನೆ ಎಂದು ವಿಧಾನಸೌಧದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.