ಬೆಂಗಳೂರು: ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. 1.55 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿ ವಿತರಣಾ ಕಾರ್ಯಕ್ರಮಕ್ಕೆ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಯಲ್ಲಿ ತಾರತಮ್ಯ ನಿವಾರಣೆ ಹಾಗೂ ಡಿಜಿಟಲ್ ಅಂತರವನ್ನು ಅಳಿಸುವ ಉದ್ದೇಶದಿಂದ ಉಚಿತ ಟ್ಯಾಬ್ಲೆಟ್ ಪಿಸಿಗಳನ್ನು ವಿತರಣೆ ಮಾಡಲಾಗಿದೆ. ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 87 ಸರ್ಕಾರಿ ಪಾಲಿಟೆಕ್ನಿಕ್ ಹಾಗೂ 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸೇರಿ ಒಟ್ಟು 1.55 ಲಕ್ಷ ವಿದ್ಯಾರ್ಥಿಗಳು ಇದರ ಉಪಯೋಗ ಪಡೆಯಲಿದ್ದಾರೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ 163 ಕೋಟಿ ರೂ. ವೆಚ್ಚ ಮಾಡಿದೆ.
ಸ್ಮಾರ್ಟ್ ಕ್ಲಾಸ್ ರೂಂಗಳಿಗೆ ಚಾಲನೆ..
ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರು ಸರ್ಕಾರಿ ಕಾಲೇಜುಗಳಲ್ಲಿ 2,500 ಸ್ಮಾರ್ಟ್ ಕ್ಲಾಸ್ ರೂಂಗಳಿಗೆ ಚಾಲನೆ ನೀಡಿದರು. ಈ ವೇಳೆ ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಅಶ್ವತ್ಥ್ ನಾರಾಯಣ, ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಕುಮಾರನಾಯಕ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್, ಸಮಾಜಕಲ್ಯಾಣ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ನಾಗಲಾಂಬಿಕೆ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಆಟೋ ಚಾಲಕನ ಬರ್ಬರ ಕೊಲೆ.. ಕಲಬುರಗಿಯಲ್ಲಿ ಮತ್ತೆ ಹರಿದ ನೆತ್ತರು