ಬೆಂಗಳೂರು : ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಆಸ್ಪತ್ರೆಯಿಂದಲೇ ಆಡಳಿತ ನಡೆಸುತ್ತಿದ್ದಾರೆ. ವರ್ಕ್ ಫ್ರಂ ಹಾಸ್ಪಿಟಲ್ ಮೂಲಕವೇ ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡುತ್ತಿದ್ದಾರೆ.
ಓದಿ: ಏಪ್ರಿಲ್ 23ಕ್ಕೆ ಸಿಎಂ ಬಿಎಸ್ವೈ ಆಸ್ಪತ್ರೆಯಿಂದ ಬಿಡುಗಡೆ ಸಾಧ್ಯತೆ..?
ಕೊರೊನಾ ಸೋಂಕು ತಗುಲಿ ಸಿಎಂ ಯಡಿಯೂರಪ್ಪ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ನಾಲ್ಕು ದಿನಗಳಾಗಿವೆ. ತುರ್ತು ಕೆಲಸಗಳಿಗೆ ಅನುಮತಿ ನೀಡುವುದು ಸೇರಿ ಅಗತ್ಯ ಸಲಹೆ, ಸೂಚನೆ ನೀಡುತ್ತಾ ಆಸ್ಪತ್ರೆಯಿಂದಲೇ ಸಿಎಂ ಆಡಳಿತ ನಿರ್ವಹಣೆ ಮಾಡುತ್ತಿದ್ದಾರೆ. ಮೂರು ಜನ ಉಪ ಮುಖ್ಯಮಂತ್ರಿಗಳಿದ್ದರೂ ಕೂಡ ಯಾರಿಗೂ ತಮ್ಮ ಉಸ್ತುವಾರಿ ಜವಾಬ್ದಾರಿ ನೀಡದೆ ಸ್ವತಃ ವರ್ಕ್ ಫ್ರಂ ಹಾಸ್ಪಿಟಲ್ ಮೂಲಕ ಕಾರ್ಯೋನ್ಮುಖರಾಗಿದ್ದಾರೆ.
ಪ್ರತಿ ದಿನ ನಾಲ್ವರು ಸಚಿವರ ಜೊತೆ ಸಿಎಂ ಯಡಿಯೂರಪ್ಪ ನಿರಂತರ ಸಂಪರ್ಕದಲ್ಲಿದ್ದಾರೆ. ತಮ್ಮ ಆಪ್ತರಾಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆ ರಾಜ್ಯದ ಕಾನೂನು ಸುವ್ಯವಸ್ಥೆ, ನೈಟ್ ಕರ್ಫ್ಯೂ ಜಾರಿಯ ಪಾಲನೆ, ಸಾರಿಗೆ ಮುಷ್ಕರದ ನಡುವೆ ನಡೆಯುತ್ತಿರುವ ಖಾಸಗಿ ಬಸ್ ಸಂಚಾರಕ್ಕೆ ಅಗತ್ಯ ಭದ್ರತೆ ಕಲ್ಪಿಸಿ ನಿರ್ವಹಣೆ ಮಾಡುತ್ತಿರುವ ಕುರಿತು ಮಾತುಕತೆ ನಡೆಸಿ ಅಗತ್ಯ ಮಾಹಿತಿ ಪಡೆದು ಸೂಚನೆ ನೀಡುತ್ತಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ ಜೊತೆ ಮಾತುಕತೆ ನಡೆಸುತ್ತಿರುವ ಸಿಎಂ, ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಹಣಕಾಸು ಬಿಡುಗಡೆ, ವಿಪತ್ತು ನಿರ್ವಹಣೆಯಡಿ ಕೈಗೊಳ್ಳುತ್ತಿರುವ ಕೆಲಸಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.
ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಸುಧಾಕರ್ ಜೊತೆ ಸಿಎಂ ನಿರಂತರ ಸಂಪರ್ಕದಲ್ಲಿದ್ದಾರೆ. ಬೆಂಗಳೂರಿನ ಕೋವಿಡ್ ಸ್ಥಿತಿಗತಿ, ರಾಜ್ಯದ ಇತರ ಕಡೆ ಇರುವ ಪರಿಸ್ಥಿತಿ, ಆಮ್ಲಜನಕ ಕೊರತೆ ನೀಗಿಸಲು ಕೈಗೊಳ್ಳುತ್ತಿರುವ ಕ್ರಮ, ಬೆಡ್‌ಗಳು, ಐಸಿಯು ಕೊರತೆ ನೀಗಿಸಲು ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಸಮಾಲೋಚನೆ ನಡೆಸಿ ಅಗತ್ಯ ಸೂಚನೆ ನೀಡುತ್ತಿದ್ದಾರೆ.
ರಾಜ್ಯದಲ್ಲಿ ಸಾರಿಗೆ ಮುಷ್ಕರ ಮುಂದುವರೆದಿದೆ. ಪರ್ಯಾಯ ವ್ಯವಸ್ಥೆ ಕುರಿತು ಡಿಸಿಎಂ ಲಕ್ಷ್ಮಣ ಸವದಿ ಜೊತೆ ಸಿಎಂ ಯಡಿಯೂರಪ್ಪ ಪ್ರತಿದಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮುಷ್ಕರದ ನಡುವೆ ಸಾರಿಗೆ ಬಸ್ ಗಳ ಸಂಚಾರ, ಖಾಸಗಿ ಬಸ್ ಗಳ ಬಳಕೆ ಸೇರಿದಂತೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಸೂಚಿಸಿದ್ದಾರೆ.
ಆರನೇ ವೇತನ ನೀಡಲು ಸಾಧ್ಯವಿಲ್ಲ, ಬಸ್‌ಗಳಿಗೆ ಹಾನಿ ಮಾಡಿದರೆ, ಸಂಚಾರಕ್ಕೆ ಅಡ್ಡಿಪಡಿಸಿದರೆ ಅವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚಿಸಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಜೊತೆಯಲ್ಲೂ ಸಿಎಂ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದಾರೆ. ಆಡಳಿತ ನಿರ್ವಹಣೆಗೆ ಪೂರಕ ಸಲಹೆ ನೀಡುತ್ತಿದ್ದಾರೆ.
ಸಿಎಂ ದಿನಚರಿ : ಪ್ರತಿ ದಿನ ಬೆಳಗ್ಗೆ ಆಸ್ಪತ್ರೆಯಲ್ಲೇ ಲಘು ವಾಯು ವಿಹಾರ ನಡೆಸಲಿರುವ ಸಿಎಂ ಯಡಿಯೂರಪ್ಪ, ನಂತರ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಲಿದ್ದಾರೆ. ಬೆಳಗಿನ ವೈದ್ಯಕೀಯ ತಪಾಸಣೆ ನಂತರ ಕೆಲ ಸಮಯ ವಿಶ್ರಾಂತಿ ಪಡೆದು ಸಚಿವರು, ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸ್ತಾರೆ.
ನಂತರ ಕೆಲ ಸಮಯ ಪುಸ್ತಕ ಓದುತ್ತಾ ಕಾಲ ಕಳೆಯಲಿದ್ದಾರೆ. ಮಧ್ಯಾಹ್ನ ಊಟದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಳ್ಳಲಿರುವ ಸಿಎಂ ಸಂಜೆ ಮತ್ತೆ ವೈದ್ಯಕೀಯ ತಪಾಸಣೆಗೆ ಒಳಪಡಲಿದ್ದಾರೆ. ಬಳಿಕ ಮತ್ತೆ ಪುಸ್ತಕ ಓದುತ್ತಾ ಕೆಲ ಸಮಯ ಕಳೆಯಲಿದ್ದು, ಅಗತ್ಯ ಬಿದ್ದರೆ ಮತ್ತೊಮ್ಮೆ ಸಚಿವರು ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಲಿದ್ದಾರೆ. ಬಳಿಕ ರಾತ್ರಿ ಊಟದ ನಂತರ ಮತ್ತೊಮ್ಮೆ ವೈದ್ಯಕೀಯ ತಪಾಸಣೆಗೆ ಒಳಪಡಲಿದ್ದಾರೆ. ಮತ್ತಷ್ಟು ಸಮಯ ಪುಸ್ತಕ ಓದಿ ನಿದ್ದೆಗೆ ಜಾರಲಿದ್ದಾರೆ.