ಬೆಂಗಳೂರು: ರಾಜ್ಯಕ್ಕೆ ಪ್ರತಿ ದಿನ 1,500 ಮೆಟ್ರಿಕ್ ಟನ್ ಆಕ್ಸಿಜನ್ ನಿಗದಿಪಡಿಸಿ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೋರಿದ್ದಾರೆ. ನಾನು ಕೂಡ ಈ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಿದ್ದು, ಕೇಂದ್ರ ಸರ್ಕಾರ ಇದಕ್ಕೆ ಸ್ಪಂದಿಸಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸೆವೆನ್ ಮಿನಿಸ್ಟರ್ ಕ್ವಾಟ್ರಸ್‌ನ ಸರ್ಕಾರಿ ನಿವಾಸದಲ್ಲಿ ರಾಜ್ಯದ ಕೋವಿಡ್ ಸ್ಥಿತಿಗತಿ ಹಾಗೂ ರಾಜ್ಯ ಸರ್ಕಾರದಿಂದ ಕೈಗೊಂಡ ಕ್ರಮಗಳ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ನಿತ್ಯ ರಾಜ್ಯಕ್ಕೆ 300 ಟನ್ ಆಕ್ಸಿಜನ್ ನಿಗದಿಪಡಿಸಲಾಗಿದೆ. ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಈ ತಿಂಗಳ ಕೊನೆಗೆ 500-600 ಟನ್ ಆಕ್ಸಿಜನ್ ಬೇಕಾಗುತ್ತದೆ. ಮುಂದಿನ ತಿಂಗಳ ಕೊನೆಗೆ 1,500 ಟನ್ ಆಕ್ಸಿಜನ್ ಬೇಕಾಗುತ್ತದೆ. ಇಷ್ಟು ಪ್ರಮಾಣದ ಆಕ್ಸಿಜನ್ ನೀಡಬೇಕೆಂದು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನಾನು ಕೂಡ ಕೇಂದ್ರಕ್ಕೆ ಕೋರಿದ್ದೇನೆ ಎಂದು ತಿಳಿಸಿದರು.
ಕೊರೊನಾ ಪಾಸಿಟಿವ್ ಆದವರೆಲ್ಲಾ ಆಸ್ಪತ್ರೆಗೆ ದಾಖಲಾಗಬೇಕಿಲ್ಲ
ಕೊರೊನಾ ಪಾಸಿಟಿವ್ ಬಂದ ಕೂಡಲೇ ಆಸ್ಪತ್ರೆಗೆ ದಾಖಲಾಗುವ ಮಟ್ಟಿಗೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಶೇ.90 ರಷ್ಟು ರೋಗಿಗಳಿಗೆ ಆಸ್ಪತ್ರೆ ಅಗತ್ಯವಿಲ್ಲ. ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆದುಕೊಳ್ಳಬಹುದು. ನಮ್ಮ ವೈದ್ಯರು ಮನೆಗೆ ಭೇಟಿ ನೀಡುವ, ರೋಗಿಗಳ ಆರೋಗ್ಯದ ಮೇಲೆ ನಿಗಾ ಇರಿಸುವ ಕೆಲಸ ಮಾಡುತ್ತಾರೆ. ಯಾವುದನ್ನು ಮಾಡಬೇಕು ಹಾಗೂ ಮಾಡಬಾರದು ಎಂಬ ಬಗ್ಗೆ ಹೆಚ್ಚು ಪ್ರಚಾರ ಮಾಡಲಾಗುವುದು ಎಂದರು.
ಕಡಿಮೆ ರೋಗ ಲಕ್ಷಣವಿದ್ದರೆ ಹೋಟೆಲ್‌ಗಳಲ್ಲಿ ರೂಪಿಸಿದ ಪರ್ಯಾಯ ಆಸ್ಪತ್ರೆಗೆ ಸೇರಬಹುದು. ಸಣ್ಣ ಲಕ್ಷಣ ಇರುವವರು ಆಸ್ಪತ್ರೆಗೆ ದಾಖಲಾದರೆ, ಚಿಕಿತ್ಸೆ ಅಗತ್ಯವಿರುವ ರೋಗಿಯ ಹಾಸಿಗೆ ಕಿತ್ತುಕೊಂಡಂತಾಗುತ್ತದೆ. ಅಂತಹ ತೀವ್ರ ರೋಗಿಗಳಿಗೆ ಆಕ್ಸಿಜನ್, ವೆಂಟಿಲೇಟರ್ ದೊರೆಯುವಂತೆ ಮಾಡಬೇಕಿದೆ. ವೈದ್ಯರು ರೋಗಿಯನ್ನು ಪರೀಕ್ಷಿಸಿ ಅಗತ್ಯವಿದ್ದರೆ ಮಾತ್ರ ದಾಖಲಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು 4 ಸಾವಿರ ಹಾಸಿಗೆ ಕೋವಿಡ್‌ಗೆ ನೀಡಿವೆ. ಸರ್ಕಾರಿ ಮೆಡಿಕಲ್ ಕಾಲೇಜುಗಳು 1 ಸಾವಿರ ಹಾಸಿಗೆ, ಸರ್ಕಾರಿ ಆಸ್ಪತ್ರೆಗಳು 1,409 ಹಾಗೂ ಖಾಸಗಿ ಆಸ್ಪತ್ರೆಗಳು 7,442 ಹಾಸಿಗೆಯನ್ನು ಕೋವಿಡ್‌ಗೆ ಮೀಸಲಿಟ್ಟಿವೆ. ಈ ಕುರಿತು ವೆಬ್ ಪೋರ್ಟಲ್‌ನಲ್ಲೇ ಮಾಹಿತಿ ಲಭ್ಯವಿದೆ. ಈ ವ್ಯವಸ್ಥೆಯನ್ನು ರಾಜ್ಯ ಮಟ್ಟದಲ್ಲಿ ಜಾರಿ ಮಾಡಲಾಗುತ್ತಿದೆ ಎಂದರು.
ಯುವಜನರು ತಮ್ಮ ಕುಟುಂಬದ ಹಿರಿಯರಿಗೆ ಲಸಿಕೆ ನೀಡಿ ಜವಾಬ್ದಾರಿ ಮೆರೆಯಬೇಕು. ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬೇಕು. ದೇಶದಲ್ಲಿ 12.7 ಕೋಟಿ ಲಸಿಕೆ ಡೋಸ್ ನೀಡಲಾಗಿದೆ. ಈ ಪೈಕಿ 99.96% ಜನರಿಗೆ ಕೊರೊನಾ ಸೋಂಕು ಬಂದಿಲ್ಲ. ಸಾವಿನ ಪ್ರಮಾಣದ ಬಗ್ಗೆ ಆತಂಕ ಬೇಡ. ವೆಂಟಿಲೇಟರ್‌ಗಳನ್ನು ಖಾಸಗಿ ಮೆಡಿಕಲ್ ಕಾಲೇಜು, ಆಸ್ಪತ್ರೆಗಳಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.