ಬೆಂಗಳೂರು: ವೀರಶೈವ ಮಹಾಸಭಾ ಹಾಗೂ ಸಮುದಾಯದ ಸಚಿವರ ಒತ್ತಡಕ್ಕೆ ಕಡೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಣಿದಿದ್ದು, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಮ್ಮತಿ ನೀಡಿದ್ದಾರೆ.
ರಾಜ್ಯದಲ್ಲಿ ವೀರಶೈವ - ಲಿಂಗಾಯತ ಸಮಾಜದ ಜನಾಂಗದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದವರಿದ್ದಾರೆ. ಈ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ವೀರಶೈವ - ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಅಗತ್ಯವಿದೆ. ಆದ್ದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ನಿಗಮವನ್ನು ಸ್ಥಾಪನೆ ಮಾಡಲು ಆದೇಶಿಸುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗಷ್ಟೇ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಸಿಎಂ ಆದೇಶ ಹೊರಡಿಸಿದ್ದರು. ಈ ಬೆನ್ನಲ್ಲೇ ಬಿಜೆಪಿ ಸರ್ಕಾರದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಸಚಿವರು ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ವೀರಶೈವ ಲಿಂಗಾಯತ ನಿಗಮ ಸ್ಥಾಪನೆಗೆ ಬೇಡಿಕೆ ಇರಿಸಿದ್ದರು. ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ನಿಗಮಕ್ಕೆ ವಿರೋಧ ವ್ಯಕ್ತಪಡಿಸಿ ಮೀಸಲಾತಿಗೆ ಆಗ್ರಹಿಸಿದ್ದರು. ಆದರೆ, ಪ್ರತಿಪಕ್ಷ ಮುಖಂಡರ ಮನವಿ ಪರಿಗಣಿಸದ ಸಿಎಂ, ಸಚಿವರು ಹಾಗೂ ವೀರಶೈವ ಮಹಾಸಭಾ ಮನವಿ ಪರಿಗಣಿಸಿ ಇಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದ್ದಾರೆ.