ನೆಲಮಂಗಲ: ತುಮಕೂರು ರಸ್ತೆಯ ಮಾದವಾರ ಬಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸ್ಥಾಪನೆಯಾಗಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ನಿನ್ನೆ ಕೇಂದ್ರದ ಸದಸ್ಯರು ತಂಡ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲಿನ ವ್ಯವಸ್ಥೆ ನೋಡಿ ಸಂತೋಷ ಪಟ್ಟಿದ್ದಾರೆ. ಇನ್ನೋಂದು ವಾರದಲ್ಲಿ ಕೋವಿಡ್ ಕೇರ್ ಕೇಂದ್ರದ ಕಾಮಾಗಾರಿ ಪೂರ್ಣಗೊಂಡು ಚಿಕಿತ್ಸೆಗೆ ಸಿದ್ಧವಾಗುತ್ತೆ. ಬೆಂಗಳೂರಿನಲ್ಲಿನ ಎಲ್ಲಾ ಕೇಂದ್ರಗಳು ತುಂಬಿದ ಮೇಲೆ ಸೋಂಕಿತರನ್ನು ಇಲ್ಲಿ ದಾಖಲಿಸಲಾಗುವುದು ಎಂದು ತಿಳಿಸಿದರು.
ರೋಗ ಲಕ್ಷಣಗಳಿಲ್ಲದ ಸೊಂಕಿತರ ಆರೈಕೆ ಇಲ್ಲಿ ಮಾಡಲಾಗುತ್ತದೆ. ದಿನದ 24 ಗಂಟೆ ಮೇಲ್ವಿಚಾರಣೆ ಮಾಡಲಾಗುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನ ಕೈಗೊಂಡಿದೆ. ಹಾಸಿಗೆ ಹಂಚಿಕೆ ವಿಚಾರದಲ್ಲಿ ಪಾರದರ್ಶಕತೆ ಕಾಪಾಡಲಾಗುತ್ತೆ. ಜನರು ತಾಳ್ಮೆ ಕಳೆದುಕೊಳ್ಳದೆ ಸಹಕರಿಸಿ, ಸೋಂಕಿತರನ್ನ ಆಸ್ಪತ್ರೆಗೆ ಸೇರಿಸಲು ತಡವಾದಲ್ಲಿ ನನಗೆ ತಿಳಿಸಿ ಎಂದು ಮನವಿ ಮಾಡಿದರು. ಶಾಸಕರು ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ವ್ಯವಸ್ಥೆ ಸರಿ ಇಲ್ಲದಿದ್ದರೆ ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಜನರು ಬೆಂಗಳೂರು ಬಿಟ್ಟು ಹಳ್ಳಿಗಳಿಗೆ ಮರಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಬೆಂಗಳೂರಿನಿಂದ ಅನಗತ್ಯವಾಗಿ ಹಳ್ಳಿಗಳಿಗೆ ಹೋಗಬೇಡಿ. ಹಳ್ಳಿಗಳಿಗೆ ಸೋಂಕು ಹರಡದಂತೆ ನೋಡಿಕೊಳ್ಳಬೇಕು. ಇದು ಒಂದೆರಡು ದಿನದಲ್ಲಿ ಮುಗಿಯುವುದಿಲ್ಲ. ಇನ್ನೂ ಆರೇಳು ತಿಂಗಳು ಇರಲಿದೆ, ಜನ ಸಹಕರಿಸಬೇಕೆಂದರು.
ತೀವ್ರಗತಿಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಅಂದುಕೊಂಡಂತೆ ನಡೆದರೆ 10100 ಹಾಸಿಗೆಯ ಅಗತ್ಯ ಮೂಲ ಸೌಲಭ್ಯಗಳನ್ನ ಕಲ್ಪಿಸಲಾಗುತ್ತದೆ. ಪ್ರತಿ 100 ಮಂದಿಗೆ ಒಬ್ಬ ವೈದ್ಯ, ಇಬ್ಬರು ನರ್ಸ್, ಬಿಬಿಎಂಪಿ ಮಾರ್ಷಲ್, ಸಹಾಯಕರನ್ನು ನಿಯೋಜಿಸಲಾಗುವುದು. 2200 ಸಿಬ್ಬಂದಿ ನೇಮಕ ಮಾಡಲಾಗುವುದು ಎಂದರು.
ಈ ಸಮಯದಲ್ಲಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ಶಾಸಕ ಎಸ್.ಆರ್.ವಿಶ್ವನಾಥ್ ಹಾಜರಿದ್ದರು.