ಬೆಂಗಳೂರು : ಆತ್ಮಸಾಕ್ಷಿ ಮತಗಳು ಸಿಗುತ್ತವೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ಕೊಡೋ ಅಗತ್ಯ ಇಲ್ಲ ಎಂದು ಸಿಎಂ ತಿರುಗೇಟು ನೀಡಿದ್ದಾರೆ. ಆರ್.ಟಿ.ನಗರ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾಳೆ ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇವೆ. ಮತದಾನದ ಬಗ್ಗೆ ಚರ್ಚೆ ಮಾಡುತ್ತೇವೆ. ಸಿದ್ದರಾಮಯ್ಯರ ಅವರ ಈ ಹೇಳಿಕೆ ಪ್ರತಿಕ್ರಿಯೆಗೆ ಯೋಗ್ಯವಲ್ಲ ಎಂದು ಟಾಂಗ್ ನೀಡಿದರು.
ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಜಯಮೃತ್ಯುಂಜಯ ಸ್ವಾಮೀಜಿಯಿಂದ ಸಿಎಂ ನಿವಾಸದೆದುರು ಪ್ರತಿಭಟನೆ ಎಚ್ಚರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ನಮ್ಮ ಸ್ವಾಮೀಜಿಗಳು. ಇದು ಅವರದ್ದೇ ಮನೆ. ಯಾವುದೇ ತೊಂದರೆ ಇಲ್ಲ. ಸ್ವಾಮೀಜಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ನಿನ್ನೆ ಸಮಾಜದ ಪ್ರಮುಖರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ನಾಳೆ, ನಾಡಿದ್ದು ಸ್ವಾಮೀಜಿಗಳ ಜತೆಗೂ ಚರ್ಚೆ ಮಾಡುತ್ತೇನೆ ಎಂದರು.
ಬೆಂಗಳೂರಿನಲ್ಲಿ ಭಯೋತ್ಪಾದಕನ ಬಂಧನ ವಿಚಾರವಾಗಿ ಮಾತನಾಡಿದ ಸಿಎಂ, ಇಂತಹವರ ಮೇಲೆ ಪೊಲೀಸ್ ಇಲಾಖೆ ನಿರಂತರ ಕಣ್ಣಿಟ್ಟಿರುತ್ತೆ. ಜಮ್ಮು ಕಾಶ್ಮೀರ ಪೊಲೀಸರಿಗೆ ನಾವು ಎಲ್ಲ ಸಹಕಾರ ಕೊಡಲಿದ್ದೇವೆ. ಹಿಂದೆಯೂ ಇಂತಹ ಬಂಧನಗಳಾಗಿವೆ ಎಂದು ತಿಳಿಸಿದರು.
ಜೂನ್ 8 ಬಿಜೆಪಿ ಶಾಸಕಾಂಗ ಸಭೆ : ಜೂನ್ 10ಕ್ಕೆ ರಾಜ್ಯಸಭೆ ಚುನಾವಣೆ ಹಿನ್ನೆಲೆ ಜೂನ್ 8ಕ್ಕೆ ಸಿಎಂ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ನಾಳೆ ಸಂಜೆ 7ಗಂಟೆಗೆ ಸಭೆ ನಿಗದಿಯಾಗಿದೆ. ಶಾಸಕಾಂಗ ಪಕ್ಷದ ಸಭೆಗೆ ಕಡ್ಡಾಯವಾಗಿ ಹಾಜರಾಗಲು ಶಾಸಕರಿಗೆ ಸೂಚನೆ ನೀಡಲಾಗಿದೆ. ಸರ್ಕಾರದ ಮುಖ್ಯಸಚೇತಕ ಸತೀಶ್ ರೆಡ್ಡಿಯಿಂದ ಸೂಚನೆ ನೀಡಲಾಗಿದೆ. ಸಭೆಯ ನಂತರ ಶಾಸಕರೆಲ್ಲರನ್ನೂ ಒಂದು ಕಡೆ ಸೇರಿಸುವ ಬಗ್ಗೆ ಪ್ಲಾನ್ ರೂಪಿಸಲಾಗುತ್ತಿದೆ ಎನ್ನಲಾಗ್ತಿದೆ.
ಇದನ್ನೂ ಓದಿ : ಇನ್ನೊಂದು ತಿಂಗಳಲ್ಲಿ ಆರ್ ಆ್ಯಂಡ್ ಡಿ ನೀತಿ ಜಾರಿ : ಸಿಎಂ ಬೊಮ್ಮಾಯಿ