ಬೆಂಗಳೂರು: ದಾವೋಸ್ಗೆ ಭಾನುವಾರ ಹೋಗುತ್ತಿದ್ದು, ಮೇ.26 ರಂದು ವಾಪಸ್ ಬರುತ್ತೇನೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಮಳೆಹಾನಿ ಸಂಬಂಧ ಡಿಸಿಗಳ ಜೊತೆ ವಿಡಿಯೋ ಸಂವಾದ ನಡೆಸಿ ಬಳಿಕ ಮಾತನಾಡಿದ ಅವರು, ನಾಳೆ ದಾವೋಸ್ ತೆರಳಿ, ಅಲ್ಲಿ ಎರಡು ಮುಖ್ಯ ಸೆಷನ್ಗಳಲ್ಲಿ ಭಾಗವಹಿಸ್ತೇನೆ. ಅಲ್ಲಿ ಕರ್ನಾಟಕದ ಪೆವಿಲಿಯನ್ ಇರಲಿದೆ. ವಿವಿಧ ದೇಶಗಳ ಉದ್ಯಮಿಗಳ ಜೊತೆ ಮಾತುಕತೆ ನಡೆಸಲಿದ್ದೇನೆ. ಇನ್ವೆಸ್ಟ್ ಕರ್ನಾಟಕ ನವೆಂಬರ್ನಲ್ಲಿ ನಡೆಯಲಿದೆ. ಆ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.
ಸಿದ್ದರಾಮಯ್ಯ, ಹೆಚ್ಡಿಕೆಯಿಂದ ಬೆಂಗಳೂರಿನಲ್ಲಿ ರೌಂಡ್ಸ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಒಳ್ಳೇದು, ಅವರು ಬೆಂಗಳೂರು ನೋಡಿದ ಹಾಗೆ ಆಗುತ್ತದೆ. ಅವರು ಈ ಹಿಂದೆ ಆಡಳಿತ ನಡೆಸಿದವರು. ಆಗ ಅಭಿವೃದ್ಧಿ ಸರಿಯಾಗಿ ಮಾಡಿದ್ದಿದ್ರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು. ದೆಹಲಿಯ ಬೆಳವಣಿಗೆ ಏನೂ ಇಲ್ಲ. ರಾಜ್ಯಸಭೆ, ಪರಿಷತ್ ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡಿದ್ದೇವೆ.
ಯಾವತ್ತೂ ಪಾರ್ಲಿಮೆಂಟ್ ಕಮಿಟಿಯೇ ಟಿಕೆಟ್ ಫೈನಲ್ ಮಾಡುವುದು. ರಾಜ್ಯಸಭೆಗೆ ಇನ್ನೂ ಸಮಯ ಇದೆ. ಮೊದಲು ಪರಿಷತ್ ಚುನಾವಣೆಗೆ ತಯಾರಿ ನಡೆದಿದ್ದು, ನಾಳೆ ನಾಡಿದ್ದು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ. ಇಂದು ಬೆಂಗಳೂರಿಗೆ ಅಷ್ಟ ಸಚಿವರನ್ನು ನೇಮಕ ಮಾಡಲಾಗುತ್ತದೆ ಎಂದರು.
ಇದಕ್ಕೂ ಮುನ್ನ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದ ಸಿಎಂ, ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರ ಜತೆ ಚರ್ಚೆಯಾಗಿಲ್ಲ. ಸುಪ್ರೀಂಕೋರ್ಟ್ ಬಿಬಿಎಂಪಿ ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
(ಇದನ್ನೂ ಓದಿ: ಸಂಪುಟ ವಿಸ್ತರಣೆ ಸದ್ಯಕ್ಕೆ ಗಗನ ಕುಸುಮ.. ಆ ಬಗ್ಗೆ ಚರ್ಚೆಯೇ ಆಗಿಲ್ಲ : ಸಿಎಂ ಬೊಮ್ಮಾಯಿ..)