ಬೆಂಗಳೂರು: ಮಹಿಳಾ ಉದ್ಯಮಿಗಳಿಗೆ (women entrepreneurs) ಪ್ರತ್ಯೇಕ ಸಂಘ ತೆರೆಯಲಾಗುವುದು. ದೃಷ್ಟಿ ಚೇತನ ಮತ್ತು ವಿಶೇಷಚೇತನ ಮಹಿಳೆಯರಿಗೆ ಉದ್ಯೋಗ ಕೊಡಲು ವಿಶೇಷ ಯೋಜನೆ ರೂಪಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ಉಬುಂಟು ಒಕ್ಕೂಟ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ವತಿಯಿಂದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ 'ಒಟ್ಟಾಗಿ ಬೆಳೆಯೋಣ (TOGETHER WE GROW) ಮತ್ತು ಅಂತಾರಾಷ್ಟ್ರೀಯ ಮಹಿಳಾ ಉದ್ದಿಮೆಗಳ ದಿನಾಚರಣೆಯನ್ನು ಉದ್ಘಾಟಿಸಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಮಾಜಿ ನಿವೃತ್ತ ಐಎಎಸ್ ಅಧಿಕಾರಿ ಕೆ ರತ್ನಪ್ರಭಾ ಸೇರಿದಂತೆ ಮಹಿಳಾ ಉದ್ಯಮಿಗಳು ಭಾಗಿಯಾಗಿದ್ದರು.
ಪ್ರತ್ಯೇಕ ಆರ್ಥಿಕ ಸಂಘ:
ಪ್ರಮುಖವಾಗಿ, ಮಹಿಳಾ ಉದ್ಯಮಿಗಳಿಗೆ (women entrepreneurs) ಪ್ರತ್ಯೇಕ ಆರ್ಥಿಕ ಸಂಘ ತೆರೆಯಲಾಗುವುದು. ಹಳ್ಳಿಗಳಲ್ಲಿರುವ ಮಹಿಳಾ ಸ್ವಸಹಾಯ ಸಂಘಗಳ ಮಾದರಿಯಲ್ಲಿ ಹೊಸ ಸಂಘ ತೆರೆಯಲಾಗುವುದು. ಆರ್ಥಿಕವಾಗಿ ಮಹಿಳಾ ಉದ್ಯಮಿಗಳಿಗೆ ಸರ್ಕಾರದಿಂದ ಈ ಸಂಘಗಳಿಗೆ ನೆರವು ಕೊಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇವೆ. ಎಲ್ಲಾ ಮಹಿಳಾ ಉದ್ದಿಮೆದಾರರಿಗೆ ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಹಾಗೂ ಉಬುಂಟು ಸಮಾವೇಶದ ನೇತೃತ್ವ ವಹಿಸಿರುವ ರತ್ನಪ್ರಭಾ ಮಾದರಿಯಾಗಿದ್ದಾರೆ ಎಂದು ಮಖ್ಯಮಂತ್ರಿ ಪ್ರಶಂಸೆ ವ್ಯಕ್ತಪಡಿಸಿದರು.
ಪರಿಷತ್ ಚುನಾವಣೆ ಪೂರ್ವತಯಾರಿಗೆ ಬಿಜೆಪಿ ಜನಸ್ವರಾಜ್ ಯಾತ್ರೆಗೆ ಚಾಲನೆ:
ಪರಿಷತ್ ಚುನಾವಣೆಗೆ ಪೂರ್ವತಯಾರಿ ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆಯ ಉದ್ದೇಶದಿಂದ ಹಮ್ಮಿಕೊಂಡಿರುವ ಬಿಜೆಪಿ ಜನಸ್ವರಾಜ್ ಯಾತ್ರೆಗೆ (BJP Jana swaraj) ಇಂದು ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಿಜೆಪಿಯ ಜನ ಸ್ವರಾಜ್ ಕಾರ್ಯಕ್ರಮಕ್ಕಾಗಿ ಕೊಪ್ಪಳ ಪ್ರವಾಸವನ್ನು ಇಂದು ಕೈಗೊಳ್ಳುತ್ತಿದ್ದೇನೆ. ಪಕ್ಷದ ಹಿರಿಯ ನಾಯಕರು ಬಿ.ಎಸ್.ವೈ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಾಲ್ಕು ತಂಡಗಳು ರಾಜ್ಯಾದ್ಯಂತ ಪ್ರವಾಸ ಮಾಡಲಿವೆ. ಅಲ್ಲಿನ ಚುನಾಯಿತ ಪ್ರತಿನಿಧಿಗಳನ್ನು ಭೇಟಿ ಮಾಡಿ ಮುಂಬರುವ ವಿಧಾನ ಪರಿಷತ್ತಿನ ಚುನಾವಣೆಗೆ ಮತದಾರರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚಿಸಲಾಗುವುದು. ನ.22 ನೇ ತಾರೀಖಿನಂದು ಮಡಿಕೇರಿಯಲ್ಲಿ ಈ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.
ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ 2 ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದ ಅಭ್ಯರ್ಥಿಗಳ ಪಟ್ಟಿಯನ್ನು ವರಿಷ್ಠರಿಗೆ ಕಳಿಸಲಾಗಿದೆ. ಇಂದು ಸಂಜೆ ಅಂತಿಮ ಪಟ್ಟಿ ಅನುಮೋದನೆಯಾಗುವ ಸಾಧ್ಯತೆ ಇದೆ ಎಂದರು.
ಕೊಪ್ಪಳ ಪ್ರವಾಸದ ನಂತರ ಬೆಳೆಹಾನಿ ಸಮೀಕ್ಷೆ ವರದಿ ತರಿಸಿಕೊಂಡು ಬೆಳೆ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.