ಬೆಂಗಳೂರು : ವಸತಿ ಯೋಜನೆಯಡಿ ಪರಿಶಿಷ್ಠ ಜಾತಿಯವರಿಗೆ ಸಹಾಯಧನವನ್ನು 1.75 ಲಕ್ಷ ರೂ.ನಿಂದ 2,00,000 ರೂ.ವರೆಗೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಧಾನಸೌಧದಲ್ಲಿ ಬಾಬು ಜಗಜೀವನ್ ರಾಂ 115ನೇ ಜನ್ಮದಿನ ಆಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮುದಾಯದವರ ಭೂ ಒಡೆತನ ಹೆಚ್ಚಿಸಲು ನಾವು ಕ್ರಮ ತೆಗೆದುಕೊಳ್ಳುತ್ತೇವೆ.
ಭೂ ಒಡೆತನ ಯೋಜನೆಯಡಿ ಭೂ ಖರೀದಿ ಮೊತ್ತವನ್ನು 15 ಲಕ್ಷ ರೂ.ನಿಂದ 20,0000 ರೂ.ಗೆ ಹೆಚ್ಚಳ ಮಾಡಲು ತೀರ್ಮಾನ ಮಾಡಲಿದ್ದೇವೆ. ಕುಟೀರ ಜ್ಯೋತಿ ಯೋಜನೆಯಡಿ 40 ಯುನಿಟ್‌ನಿಂದ 75 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಲು ಮುಂದಿನ ವಾರ ನಿರ್ಧಾರ ಕೈಗೊಳ್ಳುತ್ತೇವೆ. ಜೊತೆಗೆ ತಾಲೂಕಿಗೊಂದು ಬಾಬು ಜಗಜೀವನ್ ರಾಂ ಸ್ವಯಂ ಉದ್ಯೋಗ ತರಬೇತಿ ಕೇಂದ್ರ ಪ್ರಾರಂಭಿಸಲು ನಿರ್ಧರಿಸಲಿದ್ದೇವೆ ಎಂದರು.
ಭೂ ಮಂಡಲದಲ್ಲಿ ಎಲ್ಲಿವರೆಗೆ ನಮ್ಮ ಭಾರತ ದೇಶ ಇರುತ್ತದೆ ಅಲ್ಲಿಯವರೆಗೆ ಜಗಜೀವನ್ ರಾಂ ಹೆಸರು ಅಜರಾಮರವಾಗಿರುತ್ತದೆ. ಹಸಿರು ಕ್ರಾಂತಿ ವೇಳೆ ನಮ್ಮ ದೇಶದ ಜನಸಂಖ್ಯೆ 40 ಕೋಟಿ. ಆಗ ಆಹಾರ ಆಮದು ಮಾಡದಂಥಹ ಪರಿಸ್ಥಿತಿಯೂ ಇರಲಿಲ್ಲ. ಆಹಾರದಲ್ಲಿ ಸ್ವಾವಲಂಬನೆ ಆಗಬೇಕು ಎಂದು ಮೊದಲು ಯೋಚಿಸಿದ್ದು ಜಗಜೀವನ್ ರಾಂ. ಆಹಾರದಲ್ಲಿ ಸ್ವಾವಲಂಬನೆ ಆಗಿದ್ದರೆ ದೇಶಕ್ಕೆ ಸ್ವಾಭಿಮಾನ ಬರುತ್ತದೆ.
ಹಾಗಾಗಿ, ಆಹಾರ ವಿಚಾರದಲ್ಲಿ ಸ್ವಾವಲಂಬನೆ ಭಾವ ಮೂಡಿಸಿದ್ದು ಬಾಬು ಜಗಜೀವನ್ ರಾಂ. ಪ್ರತಿ ವ್ಯಕ್ತಿ ಸ್ವಾವಲಂಬನೆ ಆದರೆ ಮಾತ್ರ ಸಮಾನತೆ ಬರುತ್ತದೆ. ಎಲ್ಲಿವರೆಗೆ ಸಮುದಾಯ ಮುಖ್ಯವಾಹಿನಿಗೆ ಬರುದಿಲ್ಲವೋ ಅಲ್ಲಿಯವರೆಗೆ ಭಾರತದ ಸಮಗ್ರತೆ, ಅಭಿವೃದ್ಧಿ ಅಪೂರ್ಣವಾಗಿರುತ್ತದೆ ಎಂದರು. ಇದೇ ವೇಳೆ ಐದು ವರ್ಷಗಳಿಂದ ಬಾಕಿ ಇದ್ದ ಬಾಬು ಜಗಜೀವನ ರಾಂ ಪ್ರಶಸ್ತಿಯನ್ನು ಐದು ಜನಸಾಧಕರಿಗೆ ನೀಡಿ ಗೌರವಿಸಲಾಯಿತು.
ಜಗಜೀವನ್ ರಾಂ ಪ್ರತಿಮೆಗೆ ಪುಷ್ಪನಮನ : ಇದಕ್ಕೂ ಮುನ್ನ ಸಿಎಂ ಬೊಮ್ಮಾಯಿ ಬಾಬು ಜಗಜೀವನ್ ರಾಂ ಅವರ 115ನೇ ಜನ್ಮದಿನಾಚಾರಣೆ ಅಂಗವಾಗಿ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿ, ಬಾಬು ಜಗಜೀವನ್ ರಾಂ ನೋವುಂಡರೂ ಅಧಿಕಾರಕ್ಕೆ ಬಂದಾಗ ಸಮಗ್ರ ಭಾರತದ ಕಲ್ಪನೆಯೊಂದಿಗೆ ಕೆಲಸ ಮಾಡಿದರು. ಅವರಿಗೆ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಸ್ವಾತಂತ್ರ್ಯಪೂರ್ವದ ನಾಯಕ ಅವರಾಗಿದ್ದಾರೆ.
ದೀನದಲಿತರ ಧ್ವನಿಯಾಗಿ ಅವರಿಗೆ ನ್ಯಾಯ ಒದಗಿಸಲು ಅವರು ಪಟ್ಟ ಪರಿಶ್ರಮ ಬಹಳ ದೊಡ್ಡದು. ದೀನದಲಿತರ ಅಭಿಮಾನ, ಸ್ವಾಭಿಮಾನದ ಸಂಕೇತವಾಗಿದ್ದಾರೆ. ಕೃಷಿ ಸಚಿವರಾಗಿ ಅವರು ಮಾಡಿದ ಹಸಿರು ಕ್ರಾಂತಿ ಭಾರತ ದೇಶವನ್ನು ಸ್ವಾಭಿಮಾನಿ ರಾಷ್ಟ್ರವನ್ನಾಗಿ ಬೆಳೆಸಿದೆ. ವಿಜ್ಞಾನದಿಂದ ಹಸಿರು ಕ್ರಾಂತಿಯಾಗಿ ಆಹಾರ ಉತ್ಪಾದನೆಯಲ್ಲಿ ನಮ್ಮದು ಸ್ವಾವಲಂಬಿ ದೇಶವಾಗಿದೆ. ಅದಕ್ಕೆ ಜಗಜೀವನ್ ರಾಮ್ ಅವರೇ ಕಾರಣೀಭೂತರು ಎಂದರು.
ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 2.75ರಷ್ಟು ಹೆಚ್ಚಳ
ರಕ್ಷಣಾ ಮಂತ್ರಿಯಾಗಿ ರಾಷ್ಟ್ರದ ಸುರಕ್ಷತೆಗಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿಯೂ ಪ್ರಸಿದ್ಧಿ ಪಡೆದಿದ್ದರು. ಅವರ ವಿಚಾರಗಳು ನಮಗೆ ಪ್ರೇರಣೆ. ಅವರ ತತ್ವ ಆದರ್ಶಗಳನ್ನು ಇಟ್ಟುಕೊಂಡು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಹೆಚ್ಚಿನ ಅವಕಾಶಗಳನ್ನು ನೀಡುವ ಮೂಲಕ ಜಗಜೀವನ್ ರಾಂ ಅವರಿಗೆ ನಿಜವಾದ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇವೆ. ದಲಿತರ ಪ್ರೇರಣಾ ದಿನ ಎಂದು ಭಾವಿಸಿ ನಾವು ಕೆಲಸ ಮಾಡಬೇಕು ಎಂದರು.