ಬೆಂಗಳೂರು : ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಡುಗಡೆ ಮಾಡಿರುವ ಆಡಿಯೋ ಬಗ್ಗೆ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಆರ್ಟಿ ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧ ತೆನಿಖೆಯಾಗಲಿದೆ.
ಆ ಆಡಿಯೋದಲ್ಲಿ ಯಾರು ಮಾತನಾಡಿರುವುದು, ಆ ಇಬ್ಬರ ಅರ್ಹತೆ ಏನು? ಎಲ್ಲದರ ಬಗ್ಗೆಯೂ ತನಿಖೆಯಾಗುತ್ತದೆ. ಆಡಿಯೋವನ್ನು ತನಿಖೆಗೆ ಒಳಪಡಿಸುತ್ತೇವೆ. ಇದರ ಹಿಂದೆ ಯಾರೇ ಇದ್ದರೂ ಬಿಡುವುದಿಲ್ಲ. ಯಾವುದೇ ಬ್ಯಾಚ್ ಆಗಿದ್ದರೂ ತನಿಖೆ ಮಾಡಲಾಗುತ್ತದೆಯೆಂದು ಸಿಎಂ ಸ್ಪಷ್ಟಪಡಿಸಿದರು.
ಶಾಲೆಯಲ್ಲಿ ಬಾಂಬ್ ಇಟ್ಟ ಬಗ್ಗೆ ಪಾಕಿಸ್ತಾನ, ಸಿರಿಯಾದಿಂದ ಮಾಹಿತಿ ಬಂದ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಕಮಿಷನರ್ ಜೊತೆ ಚರ್ಚೆ ಮಾಡಿ ಮಾಹಿತಿ ಪಡೆಯುತ್ತೇನೆ. ಹಲವು ಬಾರಿ ಶಾಂತಿ ಕೆಡಿಸಲು ಇಂತಹ ಕರೆ ಮತ್ತು ಇಮೇಲ್ ಮಾಡುತ್ತಾರೆ.
ಈ ಹಿಂದೆ ಇಂತಹ ಪ್ರಕರಣಗಳು ಆದಾಗಲೂ ಅಂತಹ ದೇಶಗಳ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಿ, ಅವರನ್ನು ಶಿಕ್ಷೆಗೆ ಗುರಿಪಡಿಸುವ ಕೆಲಸ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ : ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ
ದೆಹಲಿಗೆ ತೆರಳುವ ವಿಚಾರವಾಗಿ ಮಾತನಾಡಿದ ಅವರು, ಇದೇ 29ರಂದು ದೆಹಲಿಯಲ್ಲಿ ಸಿಜೆ ಮತ್ತು ಸಿಎಂಗಳ ಕಾನ್ಫರೆನ್ಸ್ ಇದ್ದು, ಇದಕ್ಕಾಗಿ ದೆಹಲಿಗೆ ತೆರಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.