ಬೆಂಗಳೂರು: ಮೇಕೆದಾಟು ಯೋಜನೆ ಸಂಬಂಧ ಒಂದು ವಾರದಲ್ಲಿ ಸರ್ವಪಕ್ಷ ಸಭೆ ಕರೆಯುತ್ತೇವೆ. ಎಲ್ಲರ ಸಲಹೆ ಪಡೆದು ಮುಂದುವರೆಯುತ್ತೇವೆ. ಡಿಪಿಆರ್ಗೆ ಅನುಮೋದನೆ ಪಡೆಯಲು ಸರ್ವ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಸಿಎಂ, ಆದಷ್ಟು ಬೇಗ ಮೇಕೆದಾಟು ಯೋಜನೆ ಆರಂಭ ಆಗಬೇಕು. ಇದರ ಬಗ್ಗೆ ನಾವೆಲ್ಲರೂ ಒಟ್ಟಿಗೆ ತೀರ್ಮಾನ ತಗೋಬೇಕು. ಮುಂದಿನ ವಾರದ ಸರ್ವ ಪಕ್ಷ ಸಭೆಗೆ ಕಾನೂನು ತಂಡವೂ ಬರಲಿದೆ. ಎಲ್ಲರ ಸಲಹೆ ಪಡೆದು ಮುಂದುವರೆಯುತ್ತೇವೆ ಎಂದರು.
ಮೇಕೆದಾಟು ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಇದರ ವಾಸ್ತವಾಂಶ ನಮಗೆಲ್ಲರಿಗೂ ಗೊತ್ತಿದೆ. ಅದರ ಪರಿಣಾಮಗಳ ಬಗ್ಗೆ ಲೀಗಲ್ ಟೀಂ ಜತೆ ಚರ್ಚೆ ನಡೆಸ್ತೇನೆ. ಸಮತೋಲಿತ ಜಲಾಶಯ ಮಾಡಬೇಕು ಅನ್ನೋದು ನಮ್ಮ ಬೇಡಿಕೆ ಇದೆ. ಮೇಕೆದಾಟುವಿನಿಂದ ಮುಳುಗಡೆ ಜಾಸ್ತಿ ಆಗುತ್ತೆ ಅಂತ ಚಿಕ್ಕ ಡ್ಯಾಂ ಕಟ್ಟಲು 2012 ರಲ್ಲಿ ಚರ್ಚೆ ಆಯ್ತು. 2019-20 ರಲ್ಲಿ ಮೇಕೆದಾಟು ಡಿಪಿಆರ್ ಆಯ್ತು. ಡಿಪಿಆರ್ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಎದುರು ಇದೆ. ಕೇಂದ್ರದ ಪರಿಸರ ಇಲಾಖೆಯ ಅನುಮತಿ ಯೋಜನೆಗೆ ಬೇಕಾಗಿದೆ. ಇದೆಲ್ಲದರ ಮಧ್ಯೆ ಸುಪ್ರೀಂಕೋರ್ಟ್ ತಮಿಳುನಾಡು ಅರ್ಜಿ ಹಾಕಿದೆ. ಡಿಪಿಆರ್ಗೆ ಒಪ್ಪಿಗೆ ತಗೋಬೇಕು. ಪರಿಸರ ಇಲಾಖೆ ಅನುಮತಿ ಪಡೆಯಬೇಕು. ಇವೆರಡೂ ಕೆಲಸ ಆದ್ರೆ ಯೋಜನೆ ಶುರು ಮಾಡ್ತೇವೆ ಎಂದರು.
ಡಿಪಿಆರ್ಗೆ ಅನುಮೋದನೆ ಪಡೆಯೋದೇ ನಮ್ಮ ಅಜೆಂಡಾ: ಡಿಪಿಆರ್ ಅನುಮೋದನೆ ಪಡೆಯುವುದು ನಮ್ಮ ಮೊದಲ ಕೆಲಸ. ಪರಿಸರ ಇಲಾಖೆ ಸಮ್ಮತಿ ಪಡೆಯುವುದು ನಮ್ಮ ಕೆಲಸ. ಇದು ನಮ್ಮ ಅಜೆಂಡಾ. ಈಗಾಗಲೇ ನಾನು ಬಂದ ಬಳಿಕ ಮೂರು ಪತ್ರ ಬರೆದಿದ್ದೇನೆ. ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ನ್ಯಾಯಾಧೀಕರಣ ಆದೇಶ, ಜವಾಬ್ದಾರಿ, ಮೇಕೆದಾಟು ಯೋಜನೆ ಹೇಗೆ ತಮಿಳುನಾಡಿಗೆ ಮಾರಕವಾಗಿಲ್ಲ ಎಂಬ ಬಗ್ಗೆ ಸಮಗ್ರವಾಗಿ ಪತ್ರ ಬರೆದಿದ್ದೇವೆ. ಸರ್ವಪಕ್ಷ ಸಭೆ ಆದ ಬಳಿಕ ನಾನು ಸರ್ವಪಕ್ಷ ಸಭೆಯ ನಿರ್ಣಯವನ್ನು ಪತ್ರದ ಮೂಲಕ ಬರೆಯುತ್ತೇನೆ. ದೆವಹಲಿಗೆ ಹೋಗಿ ಕೂತು ಡಿಪಿಆರ್ ಅನುಮೋದನೆ ಪಡೆಯಲು ಸರ್ವ ಪ್ರಯತ್ನ ಮಾಡುತ್ತೇನೆ ಎಂದರು.
ಸಿಎಂ ಹೇಳಿಕೆಗೆ ವಿಪಕ್ಷ ನಾಯಕ ಆಕ್ಷೇಪ: ಇದಕ್ಕೂ ಮುನ್ನ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ತಮಿಳುನಾಡಿನವರು ರಾಜಕೀಯಕ್ಕಾಗಿ ಕೋರ್ಟ್ಗೆ ಹೋಗಿದ್ದಾರೆ. ಅದರ ಬಗ್ಗೆ ಸುಪ್ರೀಂಕೋರ್ಟ್ ಯಾವ ಆದೇಶವೂ ಕೊಟ್ಟಿಲ್ಲ. ಕೇಂದ್ರ ಸರ್ಕಾರವೇ ಮೇಕೆದಾಟು ವಿವಾದ ಕೋರ್ಟ್ನಲ್ಲಿದೆ ಅಂತಾರೆ. ಇದನ್ನು ನಾನು ಖಂಡಿಸ್ತೇನೆ ಎಂದರು.
ಸಿದ್ದರಾಮಯ್ಯ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಿಎಂ, ಅಂದು ಕೇಂದ್ರ ಸಚಿವರು ಜಲಜೀವನ್ ಮಿಷನ್ ಕಾರ್ಯಕ್ರಮಕ್ಕೆ ಬಂದಿದ್ರು. ನಾನು ಅಲ್ಲಿದ್ದಾಗ ಕೇಂದ್ರ ಸಚಿವ ಶೇಖಾವತ್ ಅವರು ವಿಷಯ ಪ್ರಸ್ತಾಪ ಮಾಡಿಲ್ಲ. ಅವರು ಸುದ್ದಿಗೋಷ್ಠಿಯಲ್ಲಿ ಆ ಮಾತು ಹೇಳಿದ್ರು, ನನ್ನ ಸಮ್ಮುಖದಲ್ಲಿ ಅಲ್ಲ ಎಂದು ಸಮಜಾಯಿಷಿ ನೀಡಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ನನ್ನ ಪ್ರಕಾರ ತಮಿಳುನಾಡಿಗೆ ಪ್ರಶ್ನೆ ಮಾಡಲು ಹಕ್ಕಿಲ್ಲ. ಅವರು ಕೋರ್ಟಿಗೆ ಹೋಗಿರಬಹುದು, ಅದು ಬೇರೆ ವಿಚಾರ. ಹಾಗಿದ್ರೆ ಸುಪ್ರೀಂ ಕೋರ್ಟ್ ಸ್ಟೇ ಕೊಡಬೇಕಿತ್ತಲ್ಲ. ತಮಿಳುನಾಡು ರಾಜಕಾರಣಕ್ಕಾಗಿ, ಓಟಿಗಾಗಿ ಕ್ಯಾತೆ ತೆಗೆಯುತ್ತಿದ್ದಾರೆ ಎಂದರು.
ಇದನ್ನೂ ಓದಿ: 'ಪಕ್ಷವನ್ನು ನೀವು ನಿಮ್ಮ ಹಿಡಿತಕ್ಕೆ ತೆಗೆದುಕೊಳ್ಳಿ': ಸಿದ್ದರಾಮಯ್ಯಗೆ ಯತ್ನಾಳ್ ಸಲಹೆ