ಬೆಂಗಳೂರು: ಯುದ್ದಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ವಿದೇಶಾಂಗ ಸಚಿವ ಜೈ ಶಂಕರ್ ಜೊತೆಗೂ ಮಾತುಕತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ.ನಗರದಲ್ಲಿರುವ ಖಾಸಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶಾಂಗ ಸಚಿವರೊಂದಿಗೆ ಇಂದು ಮಾತನಾಡಿದ್ದೇನೆ. ಅವರು ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಬಗ್ಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಬಹಳಷ್ಟು ಮಕ್ಕಳು ವೈದ್ಯಕೀಯ ವ್ಯಾಸಂಗಕ್ಕಾಗಿ ಉಕ್ರೇನ್ಗೆ ಹೋಗಿದ್ದಾರೆ. ಆ ವಿದ್ಯಾರ್ಥಿಗಳು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಅವರು ಸದ್ಯಕ್ಕೆ ಸುರಕ್ಷಿತ ಸ್ಥಳದಲ್ಲಿದ್ದಾರೆ. ಅವರ ರಕ್ಷಣೆಗೆ ಭಾರತ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ ಎಂದು ತಿಳಿಸಿದರು.
ರಸ್ತೆ ಮೂಲಕ ವಾಪಸ್ ಕರೆತರಲು ಯತ್ನ: ರಷ್ಯಾ ಭಾಷೆ ಮಾತಾಡುವ ರಾಯಭಾರಿಗಳನ್ನು ಉಕ್ರೇನ್ಗೆ ಕಳಿಸುತ್ತಿದ್ದಾರೆ. ಅಲ್ಲಿಂದ ವಿದ್ಯಾರ್ಥಿಗಳನ್ನು ರಸ್ತೆಯ ಮಾರ್ಗದಲ್ಲಿ ಸ್ಥಳಾಂತರ ಮಾಡುವ ಪ್ರಯತ್ನಗಳು ಆಗುತ್ತಿವೆ. ವಾಯು ಮಾರ್ಗದ ಮೂಲಕ ಸ್ಥಳಾಂತರ ಆಗುತ್ತಿಲ್ಲ. ಈ ಸಂಬಂಧ ವಿದೇಶಾಂಗ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿವೆ. ಉಕ್ರೇನಿನ ಪಶ್ಚಿಮ ಭಾಗದಲ್ಲಿರುವ ಸ್ಥಳಾಂತರ ರಸ್ತೆ ಮಾರ್ಗದ ಮೂಲಕ ಮಾಡಬಹುದೆಂಬ ಚಿಂತನೆ ನಡೀತಿದೆ.
ಭಾರತೀಯ ರಾಯಭಾರಿ ಕಚೇರಿ ಹೇಳದ ಹೊರತು ಯಾರೂ ಹೋಗಬಾರದು. ಇಂಥ ಸಂದರ್ಭದಲ್ಲಿ ಸುಮ್ಮಸುಮ್ಮನೆ ಯಾರೂ ಬರಬಾರದು. ಸರಿಯಾದ ಸಂದರ್ಭ ನೋಡಿಕೊಂಡು ನಮ್ಮ ರಾಯಭಾರಿ ಕಚೇರಿ ಸಂದೇಶ ಕೊಡಲಿದೆ. ಅಲ್ಲಿಯವರೆಗೆ ಕಾಯಬೇಕು ಎಂದು ಉಕ್ರೇನಿನಲ್ಲಿ ಸಿಲುಕಿರುವ ಕನ್ನಡಿಗರಿಗೆ ಕರೆ ನೀಡಿದರು.
ಎಚ್ಚರಿಕೆಯಿಂದಿರಲು ಸಲಹೆ: ಸದ್ಯ ಎಲ್ಲರೂ ಸುರಕ್ಷಿತವಾಗಿದ್ದಾರೆ. ಎಲ್ಲರ ಜೊತೆ ನಮ್ಮ ರಾಯಭಾರಿ ಕಚೇರಿ ಅಧಿಕಾರಿಗಳು ಸಂಪರ್ಕದಲ್ಲಿ ಇದ್ದಾರೆ. ನಮ್ಮವರಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡುವಂತೆ ಹೇಳಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಹೆಲ್ಪ್ ಲೈನ್ ಆರಂಭಿಸಿದೆ. ಯುದ್ಧದ ಪರಿಸ್ಥಿತಿ ತಿಳಿಗೊಳ್ಳುವರೆಗೂ ಎಲ್ಲರೂ ಎಚ್ಚರಿಕೆಯಿಂದಿರಲು ವಿದೇಶಾಂಗ ಇಲಾಖೆಯಿಂದ ಸೂಚನೆ ನೀಡಲಾಗಿದೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ: ದೇಶದಲ್ಲಿ 13 ಸಾವಿರ ಕೋವಿಡ್ ಸೋಂಕಿತರು ಪತ್ತೆ: ಚೇತರಿಕೆ ಪ್ರಮಾಣ ಶೇ 98.49