ಬೆಂಗಳೂರು: ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಕುರಿತು ಸಮಾಲೋಚನೆ ನಡೆಸಿದ್ದಾರೆ.
ಇಂದು ಬಿಎಸ್ವೈ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಪರಿಷತ್ನ ಏಳು ಸ್ಥಾನ, ಶಿಕ್ಷಕ, ಪದವೀಧರ ಕ್ಷೇತ್ರದ ನಾಲ್ಕು ಸ್ಥಾನ, ರಾಜ್ಯಸಭೆಯ ನಾಲ್ಕು ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಅಭ್ಯರ್ಥಿಗಳ ಆಯ್ಕೆ ಕುರಿತು ಮಾತುಕತೆ ನಡೆಸಿದರು. ಕಳೆದ ರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದ ಸಿಎಂ, ಇಂದು ಬೆಳಗ್ಗೆ ಪಕ್ಷದ ಹಿರಿಯ ನಾಯಕ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.
ನಾಳೆ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಿದ್ದಾರೆ. ಅದಕ್ಕೂ ಮೊದಲು ಯಡಿಯೂರಪ್ಪ ಅವರಿಂದ ಸಿಎಂ ಕೆಲವೊಂದು ಸಲಹೆ ಪಡೆದುಕೊಂಡರು.
ಸಂಪುಟ ವಿಸ್ತರಣೆ ಚರ್ಚೆ: ದೆಹಲಿ ಭೇಟಿ ವೇಳೆ ಅಮಿತ್ ಶಾ ಜೊತೆ ನಡೆಸಿದ ಮಾತುಕತೆ ಕುರಿತು ಯಡಿಯೂರಪ್ಪಗೆ ಸಿಎಂ ಮಾಹಿತಿ ನೀಡಿದರು. ವಿಸ್ತರಣೆ, ಪುನರ್ ರಚನೆ ಕುರಿತು ಕೆಲಕಾಲ ಸಮಾಲೋಚನೆ ನಡೆಸಿದರು. ಮುಂದಿನ ಎರಡು, ಮೂರು ದಿನದಲ್ಲಿ ಸಂಪುಟ ವಿಸ್ತರಣೆ ಆಗಲಿದೆ ಎನ್ನುವ ಯಡಿಯೂರಪ್ಪ ಹೇಳಿಕೆ ಹಿನ್ನೆಲೆಯಲ್ಲಿ ಸಿಎಂ ಮತ್ತು ಬಿಎಸ್ವೈ ಭೇಟಿ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಮೇ 19ರಂದು SSLC ಪರೀಕ್ಷಾ ಫಲಿತಾಂಶ ಪ್ರಕಟ: ಸಚಿವ ಬಿ.ಸಿ.ನಾಗೇಶ್