ಬೆಂಗಳೂರು : ರಾಜ್ಯದಲ್ಲಿ ಇಬ್ಬರಲ್ಲಿ ಕೋವಿಡ್-19ನ ಹೊಸ ಪ್ರಭೇದ ಒಮಿಕ್ರೋನ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ನೂತನ ಮಾರ್ಗಸೂಚಿ ರಚನೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಜ್ಞರೊಂದಿಗೆ ಸಭೆ ನಡೆಸುತ್ತಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್, ಸಚಿವ ಗೋವಿಂದ ಕಾರಜೋಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಹಿರಿಯ ಅಧಿಕಾರಿ ಮಂಜುನಾಥ್ ಪ್ರಸಾದ್, ಪಾಲಿಕೆ ಅಧಿಕಾರಿಗಳು, ಪರಿಣತರು ಹಾಗೂ ಇತರೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ.
ರೂಪಾಂತರಿ ಸೋಂಕನ್ನು ನಿಯಂತ್ರಿಸುವ ಕುರಿತು ರಾಜ್ಯ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಗುತ್ತಿದೆ. ದೇಶದಲ್ಲೇ ಮೊದಲ ಒಮಿಕ್ರೋನ್ ಪ್ರಕರಣ ಕರ್ನಾಟಕದಲ್ಲಿ ದೃಢಪಟ್ಟಿರುವ ಹಿನ್ನೆಲೆ ಹಾಗೂ ಸೋಂಕು ದೃಢಪಟ್ಟ ವ್ಯಕ್ತಿಯ ಸಂಪರ್ಕಿತರ ಪೈಕಿ ಐವರಲ್ಲಿ ಪಾಸಿಟಿವ್ ದೃಢಪಟ್ಟಿರುವುದರಿಂದ ಹೊಸ ಮಾರ್ಗ ಸೂಚಿ ರೂಪಿಸುವ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಡಿಸೆಂಬರ್ 10ರಂದು ವಿಧಾನ ಪರಿಷತ್ ಚುನಾವಣೆ ಮತ್ತು ಡಿಸೆಂಬರ್ 13 ರಿಂದ ಬೆಳಗಾವಿ ಅಧಿವೇಶನ ಇರುವ ಹಿನ್ನೆಲೆ ಹೆಚ್ಚಿನ ಮುಂಜಾಗ್ರತೆ ವಹಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ಸಿಎಂ ಕಚೇರಿಗೆ ಸ್ಯಾನಿಟೈಸೇಷನ್ : ಪರಿಣಿತರ ಸಭೆ ಆರಂಭಕ್ಕೂ ಮುನ್ನ ಸಿಎಂ ಗೃಹ ಕಚೇರಿ ಕೃಷ್ಣಾದ ಆವರಣವನ್ನು ಸ್ಯಾನಿಟೈಸೇಷನ್ ಮಾಡಲಾಯಿತು. ಇತ್ತೀಚೆಗೆ ಸಿಎಂ ಕಚೇರಿಯ ಇಬ್ಬರು ಸಿಬ್ಭಂದಿಗೆ ಕೋವಿಡ್-19 ಪಾಸಿಟಿವ್ ದೃಢ ಹಾಗೂ ಒಮಿಕ್ರೋನ್ ನಗರದಲ್ಲಿ ಪತ್ತೆಯಾಗಿರುವ ಹಿನ್ನೆಲೆ ರಾಸಾಯನಿಕ ದ್ರಾವಣ ಸಿಂಪಡಿಸಿ ಕಚೇರಿಯನ್ನು ಶುಚಿಗೊಳಿಸಲಾಯಿತು.
ಇದನ್ನೂ ಓದಿ: ಬೆಂಗಳೂರಿನ ಒಮಿಕ್ರೋನ್ ಸೋಂಕಿತ ವೈದ್ಯರ ಪತ್ನಿಗೂ ಪಾಸಿಟಿವ್; ಮನೆ ರಸ್ತೆ ಸೀಲ್ಡೌನ್