ಬೆಂಗಳೂರು : ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಳೆಹಾನಿ ಪ್ರದೇಶಗಳಾದ ಹೆಚ್ಎಸ್ಆರ್ ಲೇಔಟ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರ ಕುಂದು ಕೊರತೆಗಳನ್ನು ಆಲಿಸಿ, ಹೊಸ ಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಹೆಚ್ಎಸ್ಆರ್ ಲೇಔಟ್ ಜಂಕ್ಷನ್ನಲ್ಲಿ ಇಳಿದು ಅಗರಕೆರೆ ಸೇರುವ ರಾಜ ಕಾಲುವೆ ವೀಕ್ಷಿಸಿದರು. ಮಳೆ ಬಂದಾಗ ರಾಜಕಾಲುವೆ ನೀರು ಹೊರ ಹರಿದು ಬರುವ ಬಗ್ಗೆ ಸಿಎಂಗೆ ಶಾಸಕ ಸತೀಶ್ ರೆಡ್ಡಿ ಮಾಹಿತಿ ನೀಡಿದರು. ರಸ್ತೆ ಇಕ್ಕೆಲಗಳ ಸಣ್ಣ ಮೋರಿ ಶೋಲ್ಡರ್ ಡ್ರೈನ್, 16ನೇ ಅಡ್ಡ ರಸ್ತೆ ಷೋ ರೂಂಗಳಿಗೆ ನೀರು ನುಗ್ಗುತ್ತದೆ ಎಂದು ಶಾಸಕ ಸತೀಶ್ ರೆಡ್ಡಿ ವಿವರಿಸಿದರು.
ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ
ಆಕ್ಸ್ಫರ್ಡ್ ಕಾಲೇಜು ಇಂಜಿನಿಯರ್ ವಿಭಾಗದ ಮುಂದೆಯೇ ರಾಜ ಕಾಲುವೆ ಕಾಮಗಾರಿ ಅಪೂರ್ಣವಾಗಿದೆ. ಪೈಪ್ಗಳ ಕಂಬಿಗಳು ಬಿಟ್ಟು ಅರ್ಧದಲ್ಲಿ ನಿಂತ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಗರದ ಎಸ್ಟಿಪಿ, ಘಟಕ 35 ಎಂಎಲ್ಡಿ ಸಾಮರ್ಥ್ಯದ್ದು. ಆದರೆ, ಅಲ್ಲಿ 20 ಎಂಎಲ್ಡಿ ಮಾತ್ರ ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಸಂಸ್ಕರಣೆ ಮಾಡಲು ಸೂಚನೆ ನೀಡಲಾಗಿದೆ. ಸಂಸ್ಕರಣೆ ಆದ ನೀರು ಮತ್ತೆ ಚರಂಡಿಗೆ ಹೋಗುತ್ತಿದೆ. ಅದನ್ನು ತಡೆಯಲು ಸೂಚನೆ ನೀಡಲಾಗಿದೆ ಎಂದರು.
ಕೆರೆಗಳ ಒತ್ತುವರಿ ಸಂಬಂಧ ಕ್ರಮ
ಬೆಸ್ಕಾಂ, ಬಿಬಿಎಂಪಿ, ಜಲಮಂಡಳಿ ಮಧ್ಯೆ ಸಮನ್ವಯ ಕೊರತೆ ಇದೆ. ಸಮನ್ವಯ ಕೊರತೆ ಸರಿಪಡಿಸಲು ಸದ್ಯದಲ್ಲಿಯೇ ಸಭೆ ನಡೆಸಲಾಗುವುದು. ಕೆರೆಗಳ ಒತ್ತುವರಿ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಮಂತ್ರಿ ಡೆವೆಲಪರ್ಸ್ ವಿರುದ್ಧ ಆರೋಪ ಇದೆ.
ಅದರ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನ ಬೇರೆ ಬೇರೆ ಭಾಗಗಳಲ್ಲೂ ಸಮಸ್ಯೆ ಇದೆ. ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಮಾಸ್ಟರ್ ಪ್ಲಾನ್ ಮಾಡ್ತೇವೆ ಎಂದು ಸಿಎಂ ತಿಳಿಸಿದರು.
ರಾಜಕಾಲುವೆ ದುರಸ್ತಿಗೂ ಕ್ರಮ
ಅಗರ ಎಸ್ಟಿಪಿ ಘಟಕ ವ್ಯಾಪ್ತಿಯಲ್ಲಿ ಬರುವ ಎಲ್ಲ ಬಡಾವಣೆಗಳಿಗೂ ಮಳೆಯಿಂದ ಸಮಸ್ಯೆ ಆಗಿದೆ. 15 ರಿಂದ 20 ಕೆರೆಗಳ ನೀರು ಅಗರ ಕೆರೆಗೆ ಬರುತ್ತಿದೆ. ಚರಂಡಿಗಳು ತುಂಬಿ ಹರಿದು ಸಮಸ್ಯೆಯಾಗುತ್ತಿವೆ. ಚರಂಡಿಗಳನ್ನು ಅಗಲೀಕರಣ ಮಾಡಿ, ಆಳ ಮಾಡಲು ಹಾಗೂ ಮುಖ್ಯ ರಾಜಕಾಲುವೆ ದುರಸ್ತಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರಸ್ತೆ ಗುಂಡಿಗಳ ಬಗ್ಗೆ ಎಲ್ಲ ಮಾಹಿತಿ ಪಡೆಕೊಳ್ಳುತ್ತಿದ್ದೇನೆ. ಈ ಸಂಬಂಧ ವಿಶೇಷ ಸಭೆ ಮಾಡಿ, ರಸ್ತೆ ಗುಂಡಿಗಳ ಪರಿಶೀಲನೆ ನಡೆಸಲಾಗುವುದು. ಮಳೆ ಬರುತ್ತಿರುವುದರಿಂದ ರಸ್ತೆ ಗುಂಡಿ ಮುಚ್ಚಲು ಸಮಸ್ಯೆಯಾಗುತ್ತಿದೆ. ಮಳೆ ನಿಂತ ಮೇಲೆ ಯುದ್ಧೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: ಮೈ ಶುಗರ್ ಕಾರ್ಖಾನೆ ಖಾಸಗೀಕರಣ ಇಲ್ಲ, ಪುನಶ್ಚೇತನ ಸಂಬಂಧ ತಜ್ಞರ ಸಮಿತಿ ನೇಮಕ : ಸಿಎಂ ಬೊಮ್ಮಾಯಿ