ಬೆಂಗಳೂರು: ಶಾಸಕರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಲು ಹಾಗೂ ಪ್ರತ್ಯೇಕ ಸಭೆಯಂತಹ ಚಟುವಟಿಕೆಗೆ ಕಡಿವಾಣ ಹಾಕಲು ತಮ್ಮ ಪಕ್ಷದ ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೋಜನ ಕೂಟ ಏರ್ಪಡಿಸಿದ್ದರು.
ವಿಧಾನಸಭೆ ಕಲಾಪ ಮುಗಿದ ನಂತರ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಪಕ್ಷದ ಎಲ್ಲ ಶಾಸಕರು ಸಿಎಂ ಯಡಿಯೂರಪ್ಪ ಜೊತೆ ಅನೌಪಚಾರಿಕ ಸಭೆ ನಡೆಸಿದ್ದಾರೆ.
ಓದಿ-ಬೆಂಗಳೂರು ಎಟಿಎಂ ಅಟ್ಯಾಕ್ ಕೇಸ್: ದುಷ್ಕರ್ಮಿಗೆ 12 ವರ್ಷ ಸಜೆ
ಅಸಮಾಧಾನಿತ ಶಾಸಕರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಲು ಭೋಜನ ಕೂಟ ಕರೆದಿದ್ದ ಸಿಎಂ, ಶಾಸಕರ ಅಹವಾಲು ಆಲಿಸಿದ್ದಾರೆ ಎನ್ನಲಾಗಿದೆ. ಅವರ ಬೇಡಿಕೆ ಬಗ್ಗೆ ಕೆಲ ಭರವಸೆಗಳನ್ನು ನೀಡಿದ್ದು, ಕ್ಷೇತ್ರದ ಕೆಲಸ, ಅನುದಾನ ಬಿಡುಗಡೆ ಮಾಡುವ ಆಶ್ವಾಸನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಭವಿಷ್ಯದಲ್ಲಿ ಎಲ್ಲವನ್ನೂ ಸರಿಪಡಿಸುವ ಭರವಸೆ ನೀಡಿ ಪ್ರತ್ಯೇಕ ಸಭೆಯಂತಹ ಚಟುವಟಿಕೆ ನಡೆಸದಂತೆ ಮನವಿ ಮಾಡಿದ್ದಾರೆ.