ಬೆಂಗಳೂರು : ಕಾವೇರಿ ನೀರಾವರಿ ನಿಗಮದಡಿಯಲ್ಲಿ ಇಂದು ನಡೆದ ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಬಿಜೆಪಿ ಸಂಸದರು ಹಾಗೂ ಜೆಡಿಎಸ್ ಶಾಸಕರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ಜರುಗಿತು.
ವಿಕಾಸಸೌಧದಲ್ಲಿ ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆಯಲಾಗಿತ್ತು. ಸಚಿವರಾದ ಮಾಧುಸ್ವಾಮಿ, ಗೋಪಾಲಯ್ಯ ಹಾಗೂ ತುಮಕೂರು ಸಂಸದ ಬಸವರಾಜ್, ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹಾಗೂ ಮಂಡ್ಯ, ಹಾಸನ, ತುಮಕೂರಿನ ಜನಪ್ರತಿನಿಧಿಗಳು ಅಧಿಕಾರಿಗಳು ಭಾಗಿಯಾಗಿದ್ದರು.
ನೀರು ಹಂಚಿಕೆ ವಿಚಾರದಲ್ಲಿ ಹಾಸನದವರು ಅನ್ಯಾಯ ಮಾಡಿದ್ದಾರೆಂದು ತುಮಕೂರು ಸಂಸದ ಬಸವರಾಜು ಹೇಳಿದರು. ಆಗ ಮಧ್ಯ ಪ್ರವೇಶಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಹಾಸನದವರು ಅನ್ಯಾಯ ಮಾಡಿದರು, ಹಾಸನದವರು ಅನ್ಯಾಯ ಮಾಡಿದರೆಂದು ಹೇಳುತ್ತಲೇ ಇದ್ದೀರಾ. ಚರ್ಚೆಗೆ ಅವಕಾಶ ಕೊಡಿ. ಚರ್ಚೆ ಆಗಲಿ. ಎಲ್ಲಿ ಎಷ್ಟು ನೀರು ಬರುತ್ತದೆ. ಸಂಗ್ರಹ ಎಷ್ಟಾಗುತ್ತದೆ ಎಂಬುದು ನಮಗೂ ಗೊತ್ತಿದೆ ಎಂದು ಏರು ಧ್ವನಿಯಲ್ಲಿ ಹೇಳಿದರು.ಆಗ ಸಂಸದ ಬಸವರಾಜ್ ಅವರಿಗೂ, ಶಾಸಕ ಶಿವಲಿಂಗೇಗೌಡ ನಡುವೆ ಮಾತಿನ ಚಕಮಕಿ ಉಂಟಾಯಿತು.
ಆಗ ಮಧ್ಯ ಪ್ರವೇಶಿಸಿದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್, ಸಚಿವರೇ ಹಿಂದಿನದ್ದನ್ನು ಹೇಳೋದು ಬೇಡ. ನೀವು ಯಾವ ರೀತಿ ಮ್ಯಾನೇಜ್ ಮಾಡ್ತೀರಿ ಅನ್ನೋದನ್ನ ಅಷ್ಟೇ ಹೇಳಿ. ನೀರನ್ನು ಸರಿಯಾಗಿ ಹಂಚಿಕೆ ಮಾಡಿ ಎಂದರು.
ಸಭೆಯಲ್ಲಿ ಹೆಚ್.ಡಿ. ರೇವಣ್ಣ ಮಾತನಾಡಿ, ನೀರನ್ನು ಸಮಾನವಾಗಿ ಹಂಚಿಕೆ ಮಾಡಿ. ಹಾಸನ, ತುಮಕೂರು, ಮಂಡ್ಯ ಬೇರೆ ಬೇರೆ ಅಲ್ಲ. ಎಲ್ಲರಿಗೂ ನೀರು ಕೊಡಬೇಕು. ರೈತರು ಬೆಳೆ ಬೆಳೆಯಬೇಕು. ಸಮಾನವಾಗಿ ನೀರು ಹಂಚಿಕೆ ಮಾಡಿ ಎಂದು ಒತ್ತಾಯಿಸಿದರು.
ಹಾಸನದವರು ನೀರು ಬಿಡುವುದಿಲ್ಲವೆಂದು ಆರೋಪ ಮಾಡ್ತಾರೆ. ನಾನು 15 ವರ್ಷಗಳ ಮಾಹಿತಿ ಕೊಡುತ್ತೇನೆ. ತುಮಕೂರಿಗೂ ನೀರು ಬಿಟ್ಟಿದ್ದೇವೆ. ನೀರು ಬಿಟ್ಟಿಲ್ಲ ಅನ್ನೋದು ಸರಿಯಲ್ಲ. ತುಮಕೂರಿಗೆ ಅನ್ಯಾಯ ಆಗ್ತಿದೆ ಅಂತ ದಿನವೂ ಹೇಳ್ತಾರೆ. ರಾಜಕೀಯವಾಗಿ ಮಾತಾಡೋದು ಬೇಡ. 3 ಜಿಲ್ಲೆಗಳಿಗೂ ಸಮಾನತೆ ಇರಬೇಕು. ಎಲ್ಲಾ ಜಿಲ್ಲೆಗಳಿಗೆ ಸಮಾನವಾಗಿ ನೀರು ಹಂಚಿಕೆ ಮಾಡಿ ಎಂದು ಆಗ್ರಹಿಸಿದರು.

ರೇವಣ್ಣ- ಮಾಧುಸ್ವಾಮಿ ನಡುವೆ ಮಾತಿನ ಚಕಮಕಿ...
ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ಹೆಚ್ .ಡಿ ರೇವಣ್ಣ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯಿತು.
ಅಗತ್ಯಕ್ಕಿಂತ ಹೆಚ್ಚು ನೀರು ಹಾಸನಕ್ಕೆ ಮತ್ತು ಮಂಡ್ಯಕ್ಕೆ ಹರಿದಿದೆ. ಯಾವ ಯಾವ ಜಿಲ್ಲೆಗೆ ಎಷ್ಟು ನೀರು ಹರಿಸಬೇಕೆಂಬ ನಿಯಮವಿದೆ. ಅಷ್ಟೇ ನೀರು ಹರಿಸುವ ನಿರ್ಣಯವನ್ನು ಅಂಗೀಕರಿಸೋಣ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಆಯ್ತು ಸ್ವಾಮಿ ಅಷ್ಟೇ ನೀರು ಹರಿಸಿ. ನಿರ್ಣಯ ಮಾಡಿ. ಹಾಸನಕ್ಕೆ ಹೆಚ್ಚಿಗೆ ನೀರು ಹರಿದಿಲ್ಲವೆಂದು ರೇವಣ್ಣ ಹೇಳಿದಾಗ, ಹರಿದಿದೆ ಸ್ವಾಮಿ. ಅಧಿಕಾರಿಗಳೇ ಮಾಹಿತಿ ನೀಡ್ತಾರೆ..ಇರಿ ಎಂದು ಸಚಿವ ಮಾಧುಸ್ವಾಮಿ ಸಮಜಾಯಿಷಿ ನೀಡಿದರು.

ತಂದೆ ಕೆಳಗೆ, ಮಗ ವೇದಿಕೆ ಮೇಲೆ...
ಸಂಸದ ಪ್ರಜ್ವಲ್ ರೇವಣ್ಣ ವೇದಿಕೆ ಮೇಲೆ ಕುಳಿತಿದ್ದರೆ, ಇವರ ತಂದೆ, ಮಾಜಿ ಸಚಿವ, ಶಾಸಕ ಹೆಚ್.ಡಿ.ರೇವಣ್ಣ ವೇದಿಕೆ ಕೆಳಗೆ ಕುಳಿತಿದ್ದ ದೃಶ್ಯ ಕಂಡು ಬಂತು.