ಬೆಂಗಳೂರು/ಹೆಬ್ಬಗೋಡಿ: ಚಾಲಕನ ಅಜಾಗರೂಕತೆಯಿಂದ ಮಗುವಿನ ಮೇಲೆ ಶಾಲಾ ಬಸ್ ಹರಿದಿದೆ. ಬಸ್ ಹರಿದ ಪರಿಣಾಮ ಸ್ಥಳದಲ್ಲಿಯೇ ಮಗು ಸಾವನ್ನಪ್ಪಿರುವ ಘಟನೆ ಹೆಬ್ಬಗೋಡಿ ಸಮೀಪದ ಕಮ್ಮಸಂದ್ರದ ವಸುಂಧರಾ ಬಡಾವಣೆಯಲ್ಲಿ ನಡೆದಿದೆ.
ಸೆಂಟ್ ಫಿಟೋಸ್ ಶಾಲಾ ವಾಹನ ಸಿಬ್ಬಂದಿ ಮೂವರು ಮಕ್ಕಳನ್ನು ವಸುಂಧರಾ ಬಡಾವಣೆಯ ನಿಲ್ದಾಣದಲ್ಲಿ ಇಳಿಸಿದ್ದಾರೆ. ಇಬ್ಬರು ಮಕ್ಕಳು ಬಸ್ ಹಿಂಬದಿಗೆ ಸರಿದು ಪೋಷಕರನ್ನು ಸೇರಿಕೊಂಡಿದ್ದಾರೆ. ಎಲ್ಕೆಜಿ ಓದುತ್ತಿದ್ದ ದೀಕ್ಷಿತ್ (4) ಮೃತ ಮಗು. ಬಸ್ ಮುಂಬದಿಗೆ ಬಂದು ಮಗು ಬಸ್ ಚಕ್ರಕ್ಕೆ ಸಿಲುಕಿಕೊಂಡಿದೆ. ಇದನ್ನು ಗಮನಿಸದ ಬಸ್ ಚಾಲಕ ಮಗುವಿನ ಮೇಲೆ ಬಸ್ ಹರಿಸಿದ್ದಾನೆ.
ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶಾಲಾ ವಾಹನದ ಚಾಲಕನನ್ನು ವಶಕ್ಕೆ ಪಡೆದು, ತನಿಖೆ ಮುಂದುವರೆಸಿದ್ದಾರೆ.