ಬೆಂಗಳೂರು: ಮೈಮೇಲೆ ದೇವರು ಬರುತ್ತೆ ಎಂದು ದುಡ್ಡಿರುವ ಮಹಿಳೆಯರನ್ನ ಬುಟ್ಟಿಗೆ ಹಾಕಿಕೊಂಡು ಸೈಟ್ ಕೊಡಿಸುವುದಾಗಿ ನಂಬಿಸಿ ಖತರ್ನಾಕ್ ಮಹಿಳೆಯೊಬ್ಬಳು ಲಕ್ಷಾಂತರ ರೂಪಾಯಿ ಹಣ ಪೀಕಿದ ಘಟನೆ ನಡೆದಿದೆ.
ಚಂದ್ರಕಲಾ (45) ಸೈಟ್ ಕೊಡುವುದಾಗಿ ವಂಚಿಸಿದ ಮಹಿಳೆ. ದೇವರ ಹೆಸರಿನಲ್ಲಿ ಹತ್ತಾರು ಮಹಿಳೆಯರಿಗೆ ನಿವೇಶನದ ಆಸೆ ತೋರಿಸಿ ಎಲ್ಲರನ್ನು ಮೋಸ ಮಾಡಿದ್ದಾಳೆ ಎಂದು ಹಣ ಕಳೆದುಕೊಂಡವರು ಆಪಾದಿಸಿದ್ದಾರೆ.
ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ವಂಚಕಿಯನ್ನು ಬಂಧಿಸುತ್ತಿಲ್ಲ ಎಂದು ಮೋಸ ಹೋದವರು ಆರೋಪಿಸಿದ್ದಾರೆ. ಈ ಬಗ್ಗೆ ಸ್ಟಷ್ಟನೆ ನೀಡಿರುವ ಠಾಣೆ ಇನ್‌ಸ್ಪೆಕ್ಟರ್ ಗೌತಮ್, ಲಾಕ್ಡೌನ್ ಅವಧಿಯಲ್ಲಿ ಮಹಿಳೆ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿ ಶಶಿಕಲಾ ಜಾಮೀನು ಪಡೆದಿದ್ದಾರೆ. ಹೀಗಾಗಿ ಬಂಧನ ಸಾಧ್ಯವಾಗಿಲ್ಲ ಎಂದು ಮಾಹಿತಿ ನೀಡುತ್ತಾರೆ.
'ನನಗೆ ಮೈಮೇಲೆ ದೇವರು ಬರುತ್ತೆ ನಾನು ಹೇಳುವುದೆಲ್ಲಾ ಸತ್ಯ. ಯಾರಿಗೂ ಮೋಸ ಆಗುವುದಿಲ್ಲ ಎಂದು ಮನೆಗೆ ದೇವರು ಕರೆಸಿದ್ದೀವಿ ಬನ್ನಿ ಎಂದು ಆಮಂತ್ರಣ ಕೊಡುತ್ತಿದ್ದಳಂತೆ. ಅವರ ಮುಂದೆ ಮೈ ಮೇಲೆ ದೇವರು ಬಂದಿರುವ ರೀತಿ ನಟಿಸುತ್ತಿದ್ದಳು.
ಒಬ್ಬೊಬ್ಬರಿಂದ ₹ 20 ರಿಂದ 30 ಲಕ್ಷ ಪಡೆದು ಸೈಟ್ ಕೊಡೋದಾಗಿ ವಂಚಿಸಿದ್ದಾಳೆ. ಸೈಟ್ ನೀಡಲು ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿದರೆ. ನನ್ನ ಮೈಮೇಲೆ ದೇವರು ಬರುತ್ತೆ. ನಾನು ಮೋಸ ಮಾಡಲು ಆಗುತ್ತಾ? ನಿಮಗೆ ಸೈಟ್ ಕೊಟ್ಟೇ ಕೊಡುತ್ತೇನೆ ಎಂದು ಭರವಸೆ ನೀಡುತ್ತಿದ್ದಳು. ಒಂದೇ ಸೈಟನ್ನು ತೋರಿಸಿ 30ಕ್ಕೂ ಅಧಿಕ ಮಂದಿಗೆ ಮೋಸ ಮಾಡಿದ್ದಾಳೆ' ಎಂದು ನೊಂದವರು ಆರೋಪಿಸಿದ್ದಾರೆ.