ನೆಲಮಂಗಲ : ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದಲ್ಲಿ ನಡೆದ ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಪ್ರಕರಣ ಮಾಸುವ ಮುನ್ನವೇ ನಗರದ ಹೊರವಲಯದ ಗ್ರಾಮವೊಂದರಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ.
ಸ್ತ್ರೀ ಶಕ್ತಿ ಸಂಘಟನೆಯ ಹಣದೊಂದಿಗೆ ಪರಾರಿಯಾಗಿದ್ದ ಮಹಿಳೆಯೊಬ್ಬಳನ್ನು ಕಂಬಕ್ಕೆ ಕಟ್ಟಿ ಹಾಕಿದ್ದಲ್ಲದೇ ಸ್ಥಳೀಯರು ಚಿತ್ರಹಿಂಸೆ ನೀಡುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ ಎನ್ನಲಾಗುತ್ತಿದೆ. ಮಹಿಳೆ ಚೀಟಿ ಹಣ ಎಗರಿಸಿಕೊಂಡು ಪರಾರಿಯಾಗಿದ್ದಳಂತೆ. ಒಂದು ತಿಂಗಳ ನಂತರ ಅವಳೇ ಜನರ ಕೈಗೆ ಸಿಕ್ಕಿ ಬಿದ್ದಿದ್ದರಿಂದ ಆಕ್ರೋಶಭರಿತ ಸ್ಥಳೀಯರು ಕಂಬಕ್ಕೆ ಕಟ್ಟಿ ಹಣ ನೀಡುವಂತೆ ಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಗೆಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಕೊಳ್ಳೆಗಾಲದ ಮೂಲದ ಮಹಿಳೆಯು ಸ್ತ್ರೀ ಶಕ್ತಿ ಸಂಘಟನೆಯ 11 ಲಕ್ಷ ರೂ.ದೊಂದಿಗೆ ಪರಾರಿಯಾಗಿದ್ದಳಂತೆ. ಒಂದು ತಿಂಗಳ ನಂತರ ಗ್ರಾಮಕ್ಕೆ ವಾಪಸ್ ಆಗಿದ್ದರಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ತನ್ನ ಮಗಳೊಂದಿಗೆ ಕೊಡಿಗೆಹಳ್ಳಿಯಲ್ಲಿ ವಾಸವಿರುವ ಈ ಮಹಿಳೆ, ಇದೇ ಏರಿಯಾದಲ್ಲಿ ಸಣ್ಣ ಹೋಟೆಲ್ವೊಂದನ್ನು ನಡೆಸುತ್ತಿದ್ದಾಳೆ. ಸ್ತ್ರೀ ಶಕ್ತಿ ಸಂಘಟನೆ ಸೇರಿದಂತೆ ಗ್ರಾಮಸ್ಥರೊಂದಿಗೆ ಹಣಕಾಸಿನ ವ್ಯವಹಾರ ನಡೆಸುತ್ತಿದ್ದಳು. ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯನ್ನು ಕಂಬದಿಂದ ಬಿಡಿಸಿ ಸ್ಥಳೀಯರಿಂದ ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.