ಬೆಂಗಳೂರು : ಪ್ರತಿಪಕ್ಷದ ಸದಸ್ಯರ ಸಭಾತ್ಯಾಗದ ನಡುವೆ 2021ನೇ ಸಾಲಿನ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಇಂದು ಅಂಗೀಕಾರ ದೊರೆಯಿತು. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕ ಮಂಡನೆ ಮಾಡಿದರು.
ಇದಕ್ಕೆ ಪ್ರತಿಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಯೂನಿವರ್ಸಿಟಿ ಚಾಣಕ್ಯ ಹೌದೋ, ಇಲ್ಲವೋ.. ಆದರೆ ಈ ಬಿಲ್ ಹಿಂದೆ ಇರುವವರು ಚಾಣಕ್ಯರು ಎಂದು ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್ ಚಾಟಿ ಬೀಸಿದರು.
ವಿಧೇಯಕದ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವಾರು ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸಮಾಜಕ್ಕೆ ಒಳ್ಳೆಯದಾಗುವ ಉದ್ದೇಶದಿಂದ ಮಾತ್ರ ಚಾಣಕ್ಯ ವಿವಿಗೆ ಭೂಮಿ ಮಂಜೂರು ಮಾಡಲಾಗಿದೆಯೇ ವಿನಾ ಲಾಭ ಮಾಡುವ ಉದ್ದೇಶಕ್ಕಲ್ಲ. ಇದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ನಂತರ ಈ ವಿಧೇಯಕಕ್ಕೆ ಅನುಮೋದನೆ ದೊರೆಯಿತು.