ಬೆಂಗಳೂರು: ಆ. 20 ರಂದು ಸಿಇಟಿ ಫಲಿತಾಂಶ ಪ್ರಕಟವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ತಿಳಿಸಿದರು.
ಇಂಜಿನಿಯರಿಂಗ್ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ವಿಚಾರವಾಗಿ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಆಗಸ್ಟ್ 20ಕ್ಕೆ ಸಿಇಟಿ ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕಳೆದ ವರ್ಷದ ಶುಲ್ಕ ಪದ್ಧತಿ ಈ ವರ್ಷವೂ ಮುಂದುವರಿಕೆ ಆಗಲಿದೆ. ಇಂಜಿನಿಯರಿಂಗ್ ಕೋರ್ಸ್ನ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡಲ್ಲ. ಸೀಟು ಹಂಚಿಕೆಯಲ್ಲೂ ಬದಲಾವಣೆ ಇಲ್ಲ. ಈ ಬಾರಿಯೂ 45:35:25 ಅನುಪಾತದಲ್ಲಿ ಸೀಟು ಹಂಚಿಕೆ ಮಾಡಲಾಗುತ್ತದೆ. ಭಾಷಾ ಅಲ್ಪಸಂಖ್ಯಾತ ಮತ್ತು ಅಲ್ಪಸಂಖ್ಯಾತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಿಇಟಿ 40%, ಕೆಆರ್ ಸಿಎಂ 30% ಹಾಗು ಎನ್ಆರ್ ಐ ಮತ್ತು ಮ್ಯಾನೇಜ್ಮೆಂಟ್ ಕೋಟಾದಡಿ 30% ಸೀಟು ಹಂಚಿಕೆಯಾಗಲಿವೆ ಎಂದು ಇದೇ ವೇಳೆ ತಿಳಿಸಿದರು.
ಸಿಇಟಿ ಪರೀಕ್ಷೆಯ ಫಲಿತಾಂಶದ ಮುಂಚೆ ಪ್ರತೀ ವರ್ಷವೂ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿಗಳ ಸಭೆ ನಡೆಸಲಾಗುತ್ತದೆ. ಕಳೆದ ವರ್ಷದಷ್ಟೇ ಶುಲ್ಕ ಮತ್ತು ಸೀಟುಗಳ ಹಂಚಿಕೆಗೆ ಕಾಲೇಜು ಆಡಳಿತ ಮಂಡಳಿಗಳು ಒಪ್ಪಿವೆ. ಕಳೆದ ಬಾರಿಯ ಶುಲ್ಕ ಮಾದರಿಯನ್ನೇ ಈ ವರ್ಷ ಮುಂದುವರೆಸಲಾಗುವುದು. ಸೀಟು ಹಂಚಿಕೆಯನ್ನು ಕಳೆದ ಬಾರಿಯಂತೆ ಮಾಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಿಇಟಿ ಸೀಟ್ ಗಳಿಗೆ ರೂ.65,340 ಮತ್ತು ರೂ.58,806 ಎರಡು ಸ್ಲ್ಯಾಬ್ ನಲ್ಲಿ ಸರ್ಕಾರಿ ಶುಲ್ಕ ಇರಲಿದೆ. ಕಾಮೆಡ್ ಕೆ ಸೀಟುಗಳ ಶುಲ್ಕವೂ ಎರಡು ಸ್ಲ್ಯಾಬ್ ನಲ್ಲಿರಲಿದೆ. ರೂ.1,43748 ಮತ್ತು ರೂ.2,01,960 ಇರಲಿದೆ ಎಂದರು.
ಅಕ್ಟೋಬರ್ನಲ್ಲಿ ಆನ್ಲೈನ್ ಮೂಲಕ ಕೌನ್ಸಿಲಿಂಗ್ ನಡೆಸಲಾಗುತ್ತದೆ. ಈ ಮುಂಚೆ ಸೀಟುಗಳನ್ನು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಎರಡನೇ ರೌಂಡ್ನಲ್ಲಿ ಸರೆಂಡರ್ ಮಾಡುತ್ತಿದ್ದರು. ಆದರೆ ಈ ಬಾರಿ ಮೊದಲೇ ಸೀಟು ಸರೆಂಡರ್ ಮಾಡುವಂತೆ ಹೇಳಿದ್ದೇವೆ ಎಂದು ತಿಳಿಸಿದರು.
ಕಳೆದ ಬಾರಿ ಒಟ್ಟು 27 ಸಾವಿರ ಸೀಟುಗಳು ಹಾಗೆಯೇ ಉಳಿದುಕೊಂಡಿದ್ದವು. ಈ ಬಾರಿಯೂ ಸೀಟುಗಳು ಉಳಿಯಬಹುದು. ಸರ್ಕಾರಿ ಕೋಟಾದ ಸೀಟು ಉಳಿಯುವುದಿಲ್ಲ. ಕಾಮೆಡ್ ಕೆ ಅಡಿ ಸೀಟುಗಳು ಉಳಿಯಬಹುದು. ಶುಲ್ಕದ ಏರುಪೇರಿನಿಂದ ಉಳಿಯಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.