ಬೆಂಗಳೂರು: ಇಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಅನಧಿಕೃತ ಪ್ರಾರ್ಥನಾ ಮಂದಿರಗಳ ತೆರವು ಸಂಬಂಧ ಕಾನೂನು ತರುವ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ.
ನಂಜನಗೂಡು ದೇವಸ್ಥಾನ ತೆರವು ಭಾರೀ ವಿವಾದ ಸೃಷ್ಟಿಸಿದ್ದು, ಬಿಜೆಪಿ ಶಾಸಕರೇ ದೇವಾಲಯ ತೆರವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸುಪ್ರೀಂಕೋರ್ಟ್ ಆದೇಶದ ಅನ್ವಯ ಪ್ರಾರ್ಥನಾ ಮಂದಿರಗಳ ತೆರವು ಮಾಡಲಾಗಿದ್ದರೂ, ಪ್ರತಿಪಕ್ಷಗಳು ಸೇರಿ ಸಾರ್ವಜನಿಕ ವಲಯದಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಒಂದೆಡೆ ಸುಪ್ರೀಂಕೋರ್ಟ್ ಆದೇಶ ಪಾಲನೆ, ಇನ್ನೊಂದೆಡೆ ದೇವಸ್ಥಾನ ಹಿಂದಿನ ರಾಜಕೀಯದ ನಡುವೆ ಬೊಮ್ಮಾಯಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಡ್ಯಾಮೇಜ್ ಕಂಟ್ರೋಲ್ ಎಂಬಂತೆ ಸದ್ಯ ಸರ್ಕಾರ ಸುಮಾರು 6,300 ಅಕ್ರಮ ಪ್ರಾರ್ಥನಾ ಮಂದಿರಗಳ ತೆರವು ಕಾರ್ಯವನ್ನು ತಡೆ ಹಿಡಿದಿದೆ.
ಈ ಸಂಬಂಧ ಹೊಸ ನಿಯಮ ರೂಪಿಸುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುವ ಸಾಧ್ಯತೆ ಇದೆ. ಪ್ರಾರ್ಥನಾ ಮಂದಿರಗಳ ತೆರವಿಗೆ ನೀತಿಯೊಂದನ್ನು ತರಲು ಸರ್ಕಾರ ಚಿಂತನೆ ನಡೆಸುತ್ತಿದೆ. ಕೋರ್ಟ್ ಆದೇಶ ಪಾಲನೆ ಜೊತೆಗೆ ಜನರ ಭಾವನೆಗಳಿಗೆ ಧಕ್ಕೆ ಬಾರದಂತೆ ಸುಗಮವಾಗಿ ಅಕ್ರಮ ಪ್ರಾರ್ಥನಾ ಮಂದಿರಗಳ ತೆರವು ಸಂಬಂಧ ನೀತಿ ರೂಪಿಸಲು ಮುಂದಾಗಿದೆ.
ಸದ್ಯ ಹೈಕೋರ್ಟ್‌ಗೆ ಅಪೀಲು ಸಲ್ಲಿಸಿ, ಹೆಚ್ಚಿನ ಸಮಯಾವಕಾಶ ಕೋರಲು ಮುಂದಾಗಿದೆ ಎನ್ನಲಾಗಿದೆ. ಸಂಪುಟ ಸಭೆಯಲ್ಲಿ ಇತರ ರಾಜ್ಯಗಳಲ್ಲಿನ ಕಾನೂನು ಬಗ್ಗೆ ಅವಲೋಕನ ನಡೆಸಲಿರುವ ಸರ್ಕಾರ, ರಾಜ್ಯದಲ್ಲಿಯೂ ಹೊಸ ನಿಯಮ ರೂಪಿಸುವ ಬಗ್ಗೆ ಚಿಂತನೆ ನಡೆಸಲಿದೆ. ಕೋರ್ಟ್ ಆದೇಶ ಆಧಾರದಲ್ಲಿ ಅಕ್ರಮ ಪ್ರಾರ್ಥನಾ ಮಂದಿರಗಳ ಸಕ್ರಮ, ಪರ್ಯಾಯ ಸ್ಥಳ ಹಂಚಿಕೆ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಇದರ ಜೊತೆಗೆ ತೆರವುಗೊಳಿಸಿದ ನಂಜನಗೂಡು ದೇವಸ್ಥಾನದ ಮರು ನಿರ್ಮಾಣ ಸಂಬಂಧವೂ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ. ಸಭೆಯಲ್ಲಿ ಅಕ್ರಮ ಪ್ರಾರ್ಥನಾ ಮಂದಿರಗಳ ತೆರವು ಸಂಬಂಧ ಹೊಸ ನೀತಿ ರೂಪಿಸುವುದು ಪ್ರಮುಖ ಅಜೆಂಡಾ ಆಗಿರಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ನಂಜನಗೂಡು ದೇವಾಲಯ ತೆರವು ಅಧಿಕಾರಿಗಳ ಆತುರದ ನಿರ್ಧಾರ : ಸಿಎಂ ಬೊಮ್ಮಾಯಿ