ಬೆಂಗಳೂರು: ಕಾರ್ಮಿಕರ ವಿರೋಧದ ನಡುವೆಯೂ ಕೈಗಾರಿಕಾ ಕಾಯ್ದೆ ತಿದ್ದುಪಡಿಗೆ ಸಂಪುಟ ಒಪ್ಪಿಗೆ ನೀಡಿದೆ. ಅಲ್ಲದೆ ಹೊಸ ಕೈಗಾರಿಕಾ ನೀತಿ- 2020, ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ತಿದ್ದುಪಡಿ ವಿಧೇಯಕ (ಸಿಬ್ಬಂದಿ ಮತ್ತು ನೇಮಕ), ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ವಿಧೇಯಕ ಸೇರಿದಂತೆ ಹಲವು ವಿಧೇಯಕಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಡ್ರಗ್ಸ್ ಮತ್ತು ಲಾಜಿಸ್ಟಿಕ್ ಸೊಸೈಟಿಯನ್ನು ಪ್ರತ್ಯೇಕ ಮಾಡಿ ನಿಗಮ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯ ವಿವಿಗಳ ವಿಧೇಯಕವನ್ನು ವಾಪಸ್ ಮಾಡಲು ಸಂಪುಟ ಸಭೆ ತೀರ್ಮಾನ ಮಾಡಿದೆ ಎಂದರು.
ಎಸಿಬಿಗೆ ಕೇಡರ್ ನೇಮಕಾತಿಗೆ ಒಪ್ಪಿಗೆ ನೀಡಿದ್ದು, ಡೆಪ್ಯುಟೇಶನ್ ಆಧಾರದ ಮೇಲೆ ನೇಮಕಾತಿ ಮಾಡಲು ನಿಯಾಮಾವಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು. ಕೈಗಾರಿಕಾ ಕಾಯ್ದೆ 1948 ಸೆಕ್ಷನ್ 64, 65ಕ್ಕೆ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದ್ದು, ಕಾರ್ಮಿಕರ ಹೆಚ್ಚುವರಿ ಕೆಲಸ ಮಿತಿ ಹೆಚ್ಚಳ ಮಾಡಲಾಗಿದೆ. ಮೂರು ತಿಂಗಳಿಗೆ 75 ಗಂಟೆಯಿಂದ 125 ಗಂಟೆ ಹೆಚ್ಚುವರಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಅಂದರೆ ಮೂರು ತಿಂಗಳಿಗೆ 50 ಗಂಟೆ ಹೆಚ್ಚುವರಿ ಕೆಲಸ ಮಾಡಬೇಕು. ದಿನಕ್ಕೆ ಕನಿಷ್ಠ 35ರಿಂದ 40 ನಿಮಿಷ ಹೆಚ್ಚಳ ಆಗಲಿದೆ ಎಂದು ಹೇಳಿದರು.
ಕೊರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾಗಿರುವ ಸೂಕ್ಷ್ಮ ಮತ್ತು ಸಣ್ಣ ಉತ್ಪಾದನಾ ವಲಯಕ್ಕೆ (ಕೆಎಸ್ಎಫ್ಸಿ) ಸಬ್ಸಿಡಿ ರೂಪದಲ್ಲಿ ಶೇ. 10ರಿಂದ ಶೇ. 6ಕ್ಕೆ ಬಡ್ಡಿ ದರವನ್ನು ಇಳಿಕೆ ಮಾಡಲು ತೀರ್ಮಾನ ಮಾಡಲಾಗಿದೆ. ಕೆಎಸ್ಎಫ್ಸಿಗೆ 150 ಕೋಟಿ ರೂ. ಸಾಲ ಪಡೆಯಲು ಸರ್ಕಾರದಿಂದ ಖಾತ್ರಿ ನೀಡಲು ತಿರ್ಮಾನಿಸಲಾಗಿದೆ ಎಂದು ಹೇಳಿದರು.
ಸರಕು ಸಾಗಣೆ ಮತ್ತು ಸೇವಾ ತೆರಿಗೆ ತಿದ್ದುಪಡಿ ವಿಧೇಯಕ, ಕರ್ನಾಟಕ ಕೈಗಾರಿಕಾ ವಿವಾದ ಮತ್ತು ಇತರೆ ಕಾನೂನು ಸುಗ್ರೀವಾಜ್ಞೆ 2020 ವಿಧೇಯಕಗಳಿಗೆ ಅನುಮೋದನೆ ನೀಡಲಾಗಿದೆ ಎಂದರು. ಪಿಂಚಣಿ, ಸಣ್ಣ ಉಳಿತಾಯ ಹಾಗೂ ಆಸ್ತಿಋಣ ಇಲಾಖೆಗಳನ್ನು ಖಜಾನೆ ( ಟ್ರೇಜರಿ) ಇಲಾಖೆ ಜೊತೆಗೆ ಸೇರಿಸಲು ತೀರ್ಮಾನಿಸಲಾಗಿದ್ದು, ಕ್ರಿಯಾತ್ಮಕ ಸಂಸ್ಥೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ.
ಬೀದರ್ ಮೆಡಿಕಲ್ ಕಾಲೇಜ್ಗೆ 29.87 ಕೋಟಿ ರೂ.ಗಳಲ್ಲಿ ಉಪಕರಣ ಖರೀದಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ಅಂಕೋಲಾ ಬಳಿ ನೌಕಾದಳದ ಕಾರ್ಯಾಚರಣೆಗೆ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದಲ್ಲಿ ಸಿವಿಲ್ ಸೇವೆಗೆ ಸಂಪುಟ ಒಪ್ಪಿಗೆ ನೀಡಿದೆ. ಅದೇ ರೀತಿ ರಾಜ್ಯ ಸರ್ಕಾರದ ವತಿಯಿಂದ ಸಿವಿಲ್ ಸೇವೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.