ಬೆಂಗಳೂರು: ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವ ಉಮೇಶ್ ಕತ್ತಿ ಮನವೊಲಿಕೆ ಕಾರ್ಯದ ಬೆನ್ನಲ್ಲೇ ಮತ್ತೋರ್ವ ನಾಯಕ ಅರವಿಂದ ಲಿಂಬಾವಳಿ ಅವರ ಮನವೊಲಿಕೆ ಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ.
ಬಜೆಟ್ ಪೂರ್ವಭಾವಿ ಸಭೆಗಳನ್ನು ಮುಗಿಸಿದ ಸಿಎಂ ಸಂಜೆ ಡಾಲರ್ಸ್ ಕಾಲೋನಿ ನಿವಾಸಕ್ಕೆ ಹಿಂದುರಿಗಿದರು. ಮಾಜಿ ಶಾಸಕ ಯೋಗೇಶ್ವರ್, ಶಾಸಕ ಉಮೇಶ್ ಕತ್ತಿ ಜೊತೆ ಮಾತುಕತೆ ನಡೆಸಿದ್ದ ಸಿಎಂ ಇಂದು ಅರವಿಂದ ಲಿಂಬಾವಳಿಗೆ ದೂರವಾಣಿ ಕರೆ ಮೂಲಕ ನಿವಾಸಕ್ಕೆ ಆಗಮಿಸುವಂತೆ ಸೂಚನೆ ನೀಡಿದರು.
ಸಿಎಂ ಬುಲಾವ್ ಮೇರೆಗೆ ಆಗಮಿಸಿದ ಅರವಿಂದ ಲಿಂಬಾವಳಿ, ಬಿಎಸ್ವೈ ಜೊತೆ ಮಾತುಕತೆ ನಡೆಸಿದರು. ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಬೇಸರಗೊಂಡಿರುವ ಲಿಂಬಾವಳಿ ಅವರನ್ನು ಸಮಾಧಾನಪಡಿಸಲು ಯತ್ನಿಸಿದರು. ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಮಾತನಾಡಿ ಎಲ್ಲವನ್ನು ಸರಿಪಡಿಸುವ ಭರವಸೆ ನೀಡಿ ಕಳುಹಿಸಿದ್ದಾರೆ.