ಬೆಂಗಳೂರು : ರಾಜ್ಯದಲ್ಲಿ ಮಂಕಿಪಾಕ್ಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಕೋವಿಡ್ ರೀತಿ ಇದು ಸುಲಭವಾಗಿ ಹರಡುವ ಸಾಂಕ್ರಾಮಿಕ ರೋಗವಲ್ಲದ ಕಾರಣ ಜನತೆ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಂಕಿಪಾಕ್ಸ್ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ರೋಗ ನಿಯಂತ್ರಣ ಕುರಿತು ಸಮಾಲೋಚನೆ ನಡೆಸಲಾಯಿತು. ಸಭೆಯ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವರು, ಸುಮಾರು 80 ದೇಶದಲ್ಲಿ 20 ಸಾವಿರ ಜನರಿಗೆ ಈ ಸೋಂಕು ಹರಡಿದೆ. ಭಾರತದಲ್ಲಿ ಇದುವರೆಗೆ 6 ಕೇಸ್ ಇದೆ. ಕೇರಳ ನಾಲ್ಕು ಹಾಗೂ ದೆಹಲಿ 2 ಕೇಸ್ ಇದೆ. ಕರ್ನಾಟಕದಲ್ಲಿ ಮೂರು ಶಂಕಿತ ಕೇಸ್ ಇದೆ. ಬೆಂಗಳೂರಿನಲ್ಲಿ 2 ಹಾಗೂ ಉತ್ತರ ಕನ್ನಡ 1 ಶಂಕಿತ ಕೇಸ್ ಇದೆ. ಮಂಗಳೂರಿನ ವೆನ್ ಲಾಕ್ ಆಸ್ಪತ್ರೆ ಹಾಗೂ ಬೆಂಗಳೂರಿನಲ್ಲಿ ಒಂದು ಆಸ್ಪತ್ರೆಯನ್ನು ಮಂಕಿಪಾಕ್ಸ್ಗಾಗಿ ಮೀಸಲಿಟ್ಟಿದ್ದೇವೆ ಎಂದರು.
ಸಲಿಂಗಿಗಳಲ್ಲಿ ಕಾಣುವ ಸೋಂಕು: ಇದು ಕೋವಿಡ್ ರೀತಿ ಸುಲಭವಾಗಿ ಹರಡುವಂತಹ ಸಾಂಕ್ರಾಮಿಕ ರೋಗವಲ್ಲ. ಸಲಿಂಗಕಾಮಿಗಳಲ್ಲಿ ಹೆಚ್ಚಿನ ಪ್ರಕರಣ ಕಂಡುಬರುತ್ತಿದೆ. ಕೇರಳಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಸದ್ಯಕ್ಕೆ ಕರ್ನಾಟಕದಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
21 ದಿನ ಐಸೊಲೇಟ್: ಯಾವುದೇ ವ್ಯಕ್ತಿಗೆ ಸೋಂಕು ದೃಢಪಟ್ಟರೆ ಐಸೋಲೇಟ್ ಮಾಡಿ 21 ದಿನ ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ಮಾಡಬೇಕು. ಸಾಮಾನ್ಯವಾಗಿ ಇರುವಂತೆ ಲಕ್ಷಣಗಳೆಂದರೆ ಜ್ವರ ಬರುತ್ತದೆ, ಸ್ಕೀನ್ನಲ್ಲಿ ರ್ಯಾಷಸ್ ಇರುತ್ತದೆ. ಈಗಾಗಲೇ ಸಿಎಂ ಸೂಚನೆ ಕೊಟ್ಟಿರುವ ಹಾಗೆಯೇ ಏರ್ಪೋರ್ಟ್, ಬಂದರುಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿದ್ದೇವೆ. ಯಾರಿಗೆ ಚರ್ಮದ ಮೇಲೆ ಲೀಸನ್ ಇರುತ್ತವೆಯೋ ಅಂತಹವರನ್ನು ಅಲ್ಲಿಯೇ ತಪಾಸಣೆ ಮಾಡಿ ಅನುಮಾನ ಬಂದರೆ ಆಸ್ಪತ್ರೆಗೆ ದಾಖಲು ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ಕೇರಳದಲ್ಲಿ 5ನೇ, ದೆಹಲಿಯಲ್ಲಿ 2ನೇ ಮಂಕಿಪಾಕ್ಸ್ ಕೇಸ್.. ದೇಶದಲ್ಲಿ 7 ಪ್ರಕರಣಗಳು ಪತ್ತೆ