ಬೆಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಕುರಿತು ಸುಪ್ರೀಂಕೋರ್ಟ್ ನೀಡಿರುವ ಆದೇಶ ಸಂಬಂಧ ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಬೇಕಿದೆ. ರಾಜ್ಯ ಚುನಾವಣಾ ಆಯೋಗದ ನಿರ್ಧಾರಕ್ಕೆ ರಾಜ್ಯ ಸರ್ಕಾರ ಮಾನ್ಯತೆ ನೀಡಲಿದೆ. ಚುನಾವಣೆ ಕುರಿತು ಆಯೋಗದ ನಿರ್ಧಾರಕ್ಕೆ ಸರ್ಕಾರ ಬದ್ದವಾಗಿರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪು ಏನಿದೆಯೆಂದು ನೋಡಿದ ನಂತರ ಚರ್ಚಿಸಿ ಮುಂದೇನು ಮಾಡಬೇಕು ಎಂದು ನಿರ್ಧರಿಸುತ್ತೇವೆ. ಸುಪ್ರೀಂಕೋರ್ಟ್ ಏನು ಹೇಳಿದೆ, ಅದರ ಪರಿಣಾಮಗಳೇನು ಎಲ್ಲವನ್ನೂ ಕೂಡ ನಾವು ಪರಿಶೀಲನೆ ಮಾಡುತ್ತೇವೆ. ದೇಶದಲ್ಲಿ ಸುಪ್ರೀಂಕೋರ್ಟೇ ಸುಪ್ರೀಂ. ಆ ಹಿನ್ನೆಲೆಯಲ್ಲಿ ನಾವು ತೀರ್ಪು ಅಧ್ಯಯನ ಮಾಡಿ ನಂತರ ಏನು ಮಾಡಬೇಕೆಂದು ನಿರ್ಧರಿಸುತ್ತೇವೆ, ಆಯೋಗದ ನಿರ್ಧಾರವನ್ನು ಪಾಲಿಸುತ್ತೇವೆ ಎಂದರು.
ಡಿಕೆಶಿಗೆ ತಿರುಗೇಟು : ಚುನಾವಣೆಗೆ ಸಿದ್ದವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಆದರೆ, ಮೊದಲು ಅವರದ್ದು ಅವರು ನೋಡಿಕೊಳ್ಳಲಿ. ಕಾಂಗ್ರೆಸ್ನವರು ಸಭೆಗಳನ್ನು ಮಾಡಿದಾಗ ಹೊಡೆದಾಡಿಕೊಂಡು ಬಂದಿದ್ದಾರೆ. ಅವರು ಅವರನ್ನು ನೋಡಿಕೊಳ್ಳಲಿ ಎಂದು ಡಿಕೆಶಿಗೆ ಸಿಎಂ ತಿರುಗೇಟು ನೀಡಿದರು.
ಎಲೆಕ್ಷನ್ಗೆ ನಾವ್ ರೆಡಿ : ನಾವು ಇಡೀ ರಾಜ್ಯ ಸುತ್ತಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ತಯಾರಿ ನಡೆಸಿದ್ದೇವೆ. ಬಿಬಿಎಂಪಿ ಚುನಾವಣೆಗೂ ತಯಾರಿ ನಡೆಸಿದ್ದೇವೆ. ಎಲ್ಲಾ ಕಡೆ ಸಭೆಗಳನ್ನು ಮಾಡಿದ್ದೇವೆ. ನಾವು ಎಲ್ಲಾ ಚುನಾವಣೆಗೂ ಸಂಪೂರ್ಣ ಸಿದ್ಧವಾಗಿದ್ದೇವೆ. ಈಗ ಚುನಾವಣೆ ನಡೆದರೂ ಎದುರಿಸಲು ನಾವು ಸಿದ್ಧವಿದ್ದೇವೆ ಎಂದರು.
ಡಿಕೆಶಿಗೆ ಬೆದರಿಕೆ ಇರುವ ಬಗ್ಗೆ ಮಾಹಿತಿ ಇಲ್ಲ : ಬೆದರಿಕೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿರುವ ಮಾಹಿತಿ ಇಲ್ಲ. ಅವರು ಈ ಕುರಿತು ನನ್ನನ್ನು ಸಂಪರ್ಕಿಸಿ ಮಾಹಿತಿ ನೀಡಿಲ್ಲ. ಅವರಿಗೆ ಯಾಕೆ ಬೆದರಿಕೆ ಇದೆ ಎನ್ನುವುದು ಗೊತ್ತಿಲ್ಲ ಎಂದರು.
ಇದನ್ನೂ ಓದಿ:ಈ ಸೆಕ್ಷನ್ ಹಾಕುವುದು ಬೇಡ ಎಂದು ರಾಜ್ಯಗಳಿಗೆ ಏಕೆ ಹೇಳಬಾರದು?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ