ಬೆಂಗಳೂರು: ಕೋವಿಡ್ ಲಾಕ್‌ಡೌನ್‌ಗಳಿಂದ ಸೃಷ್ಟಿಯಾದ ಆರ್ಥಿಕ ಸಂಕಷ್ಟದಿಂದ ಇನ್ನೂ ರಾಜ್ಯ ಹೊರ ಬರಲು ಸಾಧ್ಯವಾಗಿಲ್ಲ. ಈ ಮಧ್ಯೆ ಸಿಎಂ ಬೊಮ್ಮಾಯಿ 2022-23ನೇ ಸಾಲಿನ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿದ್ದಾರೆ. ಪ್ರತಿಕೂಲ ಆರ್ಥಿಕ ಸ್ಥಿತಿಗತಿಯ ಮಧ್ಯೆ ಗಾಯದ ಮೇಲೆ ಬರೆ ಎಂಬಂತೆ ರಾಜ್ಯದ ಪಾಲಿನ ಜಿಎಸ್‌ಟಿ ಪರಿಹಾರ, ಕೇಂದ್ರದ ಅನುದಾನಗಳು ಬಿಡುಗಡೆಯಾಗದೆ ಹಾಗೇ ಬಾಕಿ ಉಳಿದುಕೊಂಡಿದೆ.
ಸಿಎಂ ಬೊಮ್ಮಾಯಿ ಮಾರ್ಚ್ 4ರಂದು 2022-23 ಸಾಲಿನ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಆರ್ಥಿಕ ಸಂಕಷ್ಟದ ಮಧ್ಯೆ ಜನಪ್ರಿಯ, ಜನರಿಗೆ ಹೊರೆಯಾಗದಂತೆ ಬಜೆಟ್ ಮಂಡಿಸುವ ಅನಿವಾರ್ಯತೆ ಸಿಎಂ ಬೊಮ್ಮಾಯಿ ಅವರದ್ದು, ರಾಜ್ಯದ ಆದಾಯ ಮೂಲಗಳು ನಿರೀಕ್ಷಿತ ಗುರಿ ಮುಟ್ಟದೇ ಇರುವುದು ಸರ್ಕಾರದ ಕೈ ಕಟ್ಟಿ ಹಾಕಿದಂತೆ ಆಗಿದೆ. ಇತ್ತ ರಾಜ್ಯ ಸರ್ಕಾರ ಬಹುವಾಗಿ ನೆಚ್ಚಿಕೊಂಡಿರುವ ಮೂಲ ಕೇಂದ್ರ ಸರ್ಕಾರದ ಅನುದಾನ, ಸಹಾಯಧನ, ಜಿಎಸ್‌ಟಿ ಪರಿಹಾರ ಹಾಗೂ ತೆರಿಗೆ ಪಾಲು.
ಗಾಯದ ಮೇಲೆ ಬರೆ ಎಳೆದಂತೆ ರಾಜ್ಯಕ್ಕೆ ಹಂಚಿಕೆಯಾದ ಜಿಎಸ್‌ಟಿ ಅನುದಾನ ಮತ್ತು ಕೇಂದ್ರದ ಅನುದಾನ ಬಿಡುಗಡೆಯಾಗದೇ ಹಾಗೇ ಬಾಕಿ ಉಳಿದುಕೊಂಡಿದೆ. ಇದರಿಂದ ರಾಜ್ಯ ಸರ್ಕಾರದ ಲೆಕ್ಕಾಚಾರವೆಲ್ಲ ಬುಡಮೇಲಾಗಿದೆ. ಈಗಾಗಲೇ ರಾಜ್ಯ ಆದಾಯ ಮೂಲಗಳಿಂದ ತೆರಿಗೆ ಸಂಗ್ರಹ ನಿರೀಕ್ಷಿಸಿದಷ್ಟು ಆಗುತ್ತಿಲ್ಲ. ಇದರ ಮಧ್ಯೆ ಕೇಂದ್ರದಿಂದ ಬರಬೇಕಾದ ಅನುದಾನಗಳು ಬರದೇ ಇರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಜಿಎಸ್‌ಟಿ ಪರಿಹಾರ ಪಾವತಿ ಬಾಕಿ ಎಷ್ಟು?: ಜಿಎಸ್‌ಟಿ ಆದಾಯ ಕೊರತೆಯನ್ನು ನೀಗಿಸಿಕೊಳ್ಳಲು ಮುಕ್ತ ಮಾರುಕಟ್ಟೆಯಲ್ಲಿ ಸಾಲದ ಮೂಲಕ ಹಣ ಸಂಗ್ರಹಿಸುವ ಆಯ್ಕೆಯನ್ನು ರಾಜ್ಯ ಸರ್ಕಾರ ಆಯ್ದುಕೊಂಡಿದೆ. ಕಳೆದ ಎರಡು ವರ್ಷದಿಂದ ಕರ್ನಾಟಕ ಜಿಎಸ್‌ಟಿ ಪರಿಹಾರವಾಗಿ ಸಾಲ ಪಡೆಯುವ ವಿಶೇಷ ಅವಕಾಶವನ್ನು ಬಳಸಿಕೊಂಡಿದೆ.
ವಾಣಿಜ್ಯ ಇಲಾಖೆ ಆಯುಕ್ತೆ ಶಿಖಾ ನೀಡಿರುವ ಮಾಹಿತಿ ಪ್ರಕಾರ 2020-21ರಲ್ಲಿ ಜಿಎಸ್‌ಟಿ ಪರಿಹಾರ ಹಣ ಮತ್ತು ಸಾಲದ ರೂಪದಲ್ಲಿ ಒಟ್ಟು 26,000 ಕೋಟಿ ರೂ. ಪಡೆದಿದೆ. ಇನ್ನೂ 4,000 ಕೋಟಿ ರೂ. ಬಾಕಿ ಉಳಿದು ಕೊಂಡಿದೆ. ಇತ್ತ 2021-22ರಲ್ಲಿ ಜಿಎಸ್‌ಟಿ ಪರಿಹಾರ ಹಾಗೂ ಸಾಲದ ರೂಪದಲ್ಲಿ 18,000 ಕೋಟಿ ರೂ.ಸ್ವೀಕರಿಸಿದೆ. ಇನ್ನೂ 7,000 ಕೋಟಿ ರೂ. ಪಾವತಿಯಾಗದೇ ಬಾಕಿ ಉಳಿದುಕೊಂಡಿದೆ. ಒಟ್ಟು 11,000 ಕೋಟಿ ರೂ. ಜಿಎಸ್‌ಟಿ ನಷ್ಟ ಪರಿಹಾರ ಹಾಗೂ ವಿಶೇಷ ಸಾಲದ ರೂಪದ ಹಣ ಬಾಕಿ ಉಳಿದುಕೊಂಡಿದೆ ಎಂದು ವಾಣಿಜ್ಯ ಇಲಾಖೆ ಆಯುಕ್ತೆ ಶಿಖಾ ಮಾಹಿತಿ ನೀಡಿದ್ದಾರೆ.
ಈ ಪರಿಹಾರ ಹಣ ಬಿಡುಗಡೆಗಾಗಿ ಕರ್ನಾಟಕ ಕಳೆದ ಒಂದು ವರ್ಷದಿಂದ ಕೇಂದ್ರದ ಕದ ತಟ್ಟುತ್ತಲೇ ಇದೆ, ಆದರೆ ಫಲಿತಾಂಶ ಮಾತ್ರ ಶೂನ್ಯ. 2020-21ಸಾಲಿನಲ್ಲಿ ಜಿಎಸ್‌ಟಿ ಪರಿಹಾರವಾಗಿ 16,116 ಕೋಟಿ ರೂ. ಜಿಎಸ್‌ಟಿ ಪರಿಹಾರ ಸಿಗುವ ಅಂದಾಜು ಮಾಡಲಾಗಿತ್ತು. ಈವರೆಗೆ ಬಿಡುಗಡೆಯಾಗಿರುವುದು 13,789 ಕೋಟಿ ರೂ. ಮಾತ್ರ. ಇನ್ನು 2022-23ನೇ ಸಾಲಿನಲ್ಲಿ ಜಿಎಸ್‌ಟಿ ಪರಿಹಾರವಾಗಿ 12,708 ಕೋಟಿ ರೂ. ಹಣ ಬಿಡುಗಡೆಯ ಅಂದಾಜು ಮಾಡಿತ್ತು. ಆದರೆ, ಈವರೆಗೆ ಬಿಡುಗಡೆಯಾಗಿದ್ದು 5,447.97 ಕೋಟಿ ರೂ. ಮಾತ್ರ.
ಕೇಂದ್ರದ ಅನುದಾನಗಳೂ ಪಾವತಿಯಾಗದೆ ಬಾಕಿ: ರಾಜ್ಯ ಸರ್ಕಾರ ತನ್ನ ಹಣಕಾಸು ನಿರ್ವಹಣೆಗೆ ಬಹುವಾಗಿ ನೆಚ್ಚಿಕೊಂಡಿರುವುದು ಕೇಂದ್ರದ ಅನುದಾನಗಳನ್ನು. ಆದರೆ, ಕೇಂದ್ರದ ಅನುದಾನವೂ ಬಿಡುಗಡೆಯಾಗದೇ ಬಾಕಿ ಉಳಿದುಕೊಂಡಿರುವುದು ರಾಜ್ಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರಿಂದ ರಾಜ್ಯದ ಬಜೆಟ್ ನಿಭಾಯಿಸುವುದೇ ಕಬ್ಬಿಣದ ಕಡಲೆಯಂತಾಗಿದೆ. ಆರ್ಥಿಕ ಇಲಾಖೆ ನೀಡಿದ ಮಾಹಿತಿ ಪ್ರಕಾರ ಕೇಂದ್ರದ ತೆರಿಗೆಗಳಲ್ಲಿ ರಾಜ್ಯದ ಪಾಲಿನ ರೂಪದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 2020-21ರಲ್ಲಿ 28,591 ಕೋಟಿ ರೂ. ಬಿಡುಗಡೆ ಮಾಡಬೇಕಾಗಿತ್ತು. ಆದರೆ, ಬಿಡುಗಡೆಯಾಗಿದ್ದು 21,694 ಕೋಟಿ ರೂಪಾಯಿ ಮಾತ್ರ. ಅಂದಾಜಿಗಿಂತ 6,897 ಕೋಟಿ ರೂ. ಪಾವತಿಯಾಗದೆ ಬಾಕಿ ಉಳಿದುಕೊಂಡಿದೆ.
ಇನ್ನು, 2021-22ರಲ್ಲಿ ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲಾಗಿ 24,273 ಕೋಟಿ ರೂ. ಬಿಡುಗಡೆ ಮಾಡಬೇಕಾಗಿತ್ತು. ಆದರೆ ಈವರೆಗೆ ರಾಜ್ಯ ಸರ್ಕಾರ ಸ್ವೀಕಾರ ಮಾಡಿರುವುದು 16,422 ಕೋಟಿ ರೂ. ಮಾತ್ರ. ಅಂದರೆ ಇನ್ನೂ 7,851 ಕೋಟಿ ರೂ. ಬಾಕಿ ಉಳಿದುಕೊಂಡಿದೆ. ಇತ್ತ ಕೇಂದ್ರದಿಂದ ವಿವಿಧ ಯೋಜನೆಗಳಿಗೆ 2021-22 ಸಾಲಿನಲ್ಲಿ 28,245 ಕೋಟಿ ರೂ. ಅನುದಾನ ಬಿಡುಗಡೆ ಅಂದಾಜು ಮಾಡಲಾಗಿತ್ತು. ಈವರೆಗೆ ಅನುದಾನ ಬಿಡುಗಡೆ ಮಾಡಿರುವುದು 19,737 ಕೋಟಿ ರೂ. ಆಗಿದೆ. ಇದರಲ್ಲಿ ಜಿಎಸ್‌ಟಿ ಪರಿಹಾರವೂ ಒಳಗೊಂಡಿದೆ.
ಇದರ ಜೊತೆಗೆ 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಸುಮಾರು 6,000 ಕೋಟಿ ರೂ. ನಿರ್ದಿಷ್ಟ ಹಣಕಾಸು ನೆರವು ನೀಡಲು ಶಿಫಾರಸು ಮಾಡಿದೆ. ಆದರೆ ಈವರೆಗೂ ಕೇಂದ್ರ ಸರ್ಕಾರ ಆ ಹಣವನ್ನು ಬಿಡುಗಡೆ ಮಾಡಿಲ್ಲ. ಈ ಸಂಬಂಧ ಸಿಎಂ ಬೊಮ್ಮಾಯಿ ಕೇಂದ್ರ ಹಣಕಾಸು ಸಚಿವೆಗೆ ಮನವಿ ಮಾಡುತ್ತಿದ್ದಾರೆ. ಆದರೆ, ಯಾವುದೇ ಸ್ಪಂದನೆ ಸಿಕ್ಕಿಲ್ಲ.
ಇದನ್ನೂ ಓದಿ: ಬೊಮ್ಮಾಯಿ ಚೊಚ್ಚಲ ಬಜೆಟ್ನಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ ಖಚಿತ: ಸಿಎಂ ಲೆಕ್ಕಾಚಾರ ಹೇಗಿದೆ?