ಬೆಂಗಳೂರು: ರೇಸ್ ಕುದುರೆಗಳ ಸುರಕ್ಷತೆ ಹಿನ್ನೆಲೆ ಹೊಸದಾಗಿ ಲಾಯಗಳನ್ನು ನಿರ್ಮಿಸಬೇಕಿರುವುದರಿಂದ ಅವುಗಳಲ್ಲಿ ಕೆಲವನ್ನು ಸ್ಥಳಾಂತರಿಸಲು ಸಿದ್ಧವಿದ್ದೇವೆ ಎಂದು ಬೆಂಗಳೂರು ಟರ್ಫ್ ಕ್ಲಬ್(ಬಿಟಿಸಿ) ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಬೆಂಗಳೂರು ಟರ್ಫ್ ಕ್ಲಬ್ ನಲ್ಲಿ ರೇಸ್ ಕುದುರೆಗಳನ್ನು ಹೀನಾಯವಾಗಿ ನಡೆಸಿಕೊಳ್ಳುವ ಮೂಲಕ ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿ ಕಂಪ್ಯಾಷನ್ ಅನ್ ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕ್ಯೂಪಾ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಬಿಟಿಸಿ ಪರ ವಾದಿಸಿದ ಹಿರಿಯ ವಕೀಲರು, ಕ್ಲಬ್ನ್ನು ಕಳೆದ 150 ವರ್ಷಗಳಿಂದ ನಡೆದುಕೊಂಡು ಬರಲಾಗುತ್ತಿದೆ. ಇದೀಗ ಅಲ್ಲಿರುವ ಲಾಯಗಳನ್ನು ಒಂದೇ ಬಾರಿಗೆ ಮೇಲ್ದರ್ಜಗೇರಿಸುವುದು ಕಷ್ಟ. ಹೀಗಾಗಿ ಹಂತ ಹಂತವಾಗಿ ಅವುಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. ಅಗತ್ಯವೆನಿಸದರೆ ಕ್ಲಬ್ ನಲ್ಲಿರುವ 800 ಕುದುರೆಗಳಲ್ಲಿ 200 ಕುದುರೆಗಳನ್ನು ಸ್ಥಳಾಂತರಿಸಲಾಗುವುದು ಎಂದರು.
ಬಿಟಿಸಿ ಆದಾಯದಲ್ಲಿ ರಾಜ್ಯ ಸರ್ಕಾರವೂ ಶುಲ್ಕ, ತೆರಿಗೆಗಳನ್ನು ಸಂಗ್ರಹಿಸಿದೆ. ಹೀಗಾಗಿ ಕ್ಲಬ್ ಅಭಿವೃದ್ಧಿಗೆ ಸರ್ಕಾರವೂ ನೆರವು ನೀಡಬೇಕಿದ್ದು, ರಾಜ್ಯ ಸರ್ಕಾರವನ್ನೂ ಪ್ರತಿವಾದಿಯಾಗಿ ಸೇರಿಸಲು ಅನುಮತಿಸಬೇಕು ಎಂದು ಕೋರಿದರು.
ಇದಕ್ಕೆ ನಿರಾಕರಿಸಿದ ಪೀಠ, ಡಾ. ಕ್ಯಾಪ್ಟನ್ ರವಿ ರಾಯದುರ್ಗ ಅವರು ಮಾಡಿರುವ ಶಿಫಾರಸ್ಸು ವರದಿಯನ್ನು ಅನುಷ್ಠಾನಗೊಳಿಸುವ ಸಂಬಂಧ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಿದ್ದೀರಿ ಎಂಬುದನ್ನು ವಿವರವಾದ ವರದಿಯನ್ನು ಪ್ರಮಾಣಪತ್ರದ ಮೂಲಕ ಏಪ್ರಿಲ್ 17ರೊಳಗೆ ಸಲ್ಲಿಸಿ ಎಂದು ಬಿಟಿಸಿ ಪರ ವಕೀಲರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಏ.19ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ಬೆಂಗಳೂರು ಟರ್ಫ್ ಕ್ಲಬ್ ನಲ್ಲಿರುವ ಕುದುರೆಗಳನ್ನು ರೇಸ್ನಲ್ಲಿ ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ. ಅನಾರೋಗ್ಯಕ್ಕೀಡಾದ, ಗಾಯಗೊಂಡ ಕುದುರೆಗಳನ್ನೂ ಕೂಡ ರೇಸ್ ನಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅವುಗಳಿಗೆ ಸರಿಯಾಗಿ ಚಿಕಿತ್ಸೆ ಕೊಡಿಸುತ್ತಿಲ್ಲ, ಆರೈಕೆ ಮಾಡುತ್ತಿಲ್ಲ. ಹೀಗಾಗಿ ಅವು ಸಾವಿಗೀಡಾಗುತ್ತಿವೆ ಎಂದು ಆರೋಪಿಸಿ ಕ್ಯೂಪಾ ಪಿಐಎಲ್ ಸಲ್ಲಿಸಿತ್ತು.
ಈ ಅರ್ಜಿ ಸಂಬಂಧ ಪರಿಶೀಲನೆ ನಡೆಸಿ ವರದಿ ನೀಡುವಂತೆ ಪೀಠ ಡಾ. ಕ್ಯಾಪ್ಟನ್ ರವಿ ರಾಯದುರ್ಗ ಅವರಿಗೆ ಸೂಚಿಸಿತ್ತು. ವರದಿ ನೀಡಿದ್ದ ಅಧಿಕಾರಿ ಬಿಟಿಸಿಯಲ್ಲಿರುವ ಶೇ 80ರಷ್ಟು ಕುದುರೆ ಲಾಯಗಳು ಸುರಕ್ಷಿತವಾಗಿಲ್ಲ. ಅವುಗಳನ್ನು ಹೊಸದಾಗಿ ಮತ್ತು ವೈಜ್ಞಾನಿಕವಾಗಿ ನಿರ್ಮಿಸಬೇಕಿದೆ ಎಂದು ಶಿಫಾರಸು ಮಾಡಿದ್ದರು. ವರದಿ ಅನುಷ್ಠಾನಗೊಳಿಸಲು ಹಿಂದೇಟು ಹಾಕಿದ್ದರಿಂದ ಕ್ಲಬ್ಗೆ ತರಾಟೆ ತೆಗೆದುಕೊಂಡಿದ್ದ ಪೀಠ, ಕುದುರೆಗಳನ್ನು ಸ್ಥಳಾಂತರಿಸಲಾಗದಿದ್ದರೆ ರೇಸ್ ಚಟುವಟಿಕೆ ನಿಲ್ಲಿಸಿ, ಕುದುರೆಗಳನ್ನು ಸ್ಥಳಾಂತರಿಸಿ ಎಂದು ಮೌಖಿಕವಾಗಿ ಸೂಚಿಸಿತ್ತು.