ಬೆಂಗಳೂರು: ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಅನ್ನು ಸಮರ್ಪಕವಾಗಿ ಕೊಡುತ್ತಿಲ್ಲ ಎಂದು ಜೆಡಿಎಸ್ ಸದಸ್ಯ ವೆಂಕಟರಾವ್ ನಾಡಗೌಡ ಆರೋಪಿಸಿದ್ದಾರೆ. ವಿಧಾನಸಭೆಯಲ್ಲಿ ನಿನ್ನೆ ಬೇಡಿಕೆಗಳ ಮೇಲಿನ ಚರ್ಚೆ ವೇಳೆ ವೆಂಕಟರಾವ್ ನಾಡಗೌಡ ಆರೋಪಕ್ಕೆ ಉತ್ತರ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈಗಾಗಲೇ ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಕೊಡುತ್ತಿದ್ದೇವಪ್ಪಾ ಎಲ್ಲ ಕೊಟ್ಟಿಲ್ಲ ಅಂತಾ ಹೇಳಬೇಡಿ ಎಂದು ತಾಕೀತು ಮಾಡಿದರು.
ಸೂಕ್ತ ಬೆಂಬಲ ಬೆಲೆ ಸಿಗಬೇಕು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ನೂರಕ್ಕೆ ತೊಂಭತ್ತು ಭಾಗ ನಾವು ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡಿದ್ದೇವೆ. ಸರ್ಕಾರ ರೈತರ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ಆದರೆ ಮಾಡಬೇಕಿರುವುದು ಇನ್ನೂ ಬಹಳಷ್ಟಿದೆ. ಅವರ ಸಮಸ್ಯೆಗಳನ್ನು ಎಲ್ಲರೂ ಸೇರಿ ಚರ್ಚೆ ಮಾಡೋಣ. ಅದರೆ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲದೇ ದಯವಿಟ್ಟು ಮಾತನಾಡಬೇಡಿ ಎಂದು ಹೇಳಿದರು.
ಮೂರು ಹೆಚ್ಪಿ ಯಿಂದ ಎಂಟು ಹೆಚ್ಪಿ ಪಂಪ್ ಸೆಟ್ಗಳನ್ನು ಹೊಂದಿರುವ ಎಲ್ಲ ರೈತರಿಗೆ ಉಚಿತವಾಗಿ ವಿದ್ಯುತ್ ಪೂರೈಸಲಾಗುತ್ತಿದೆ. ನಿಮಲ್ಲಿರುವ ಮಾಹಿತಿ ತಪ್ಪು. ನಿಮಗೇನಾದರೂ ಸಮಸ್ಯೆ ಇದ್ದರೆ ದಯವಿಟ್ಟು ಸ್ಪಷ್ವವಾಗಿ ಹೇಳಿ. ಯಾವುದನ್ನೂ ಗೊಂದಲಮಯವಾಗಿ ಸದನದ ಮುಂದೆ ಇಡಬೇಡಿ. ನೀವು ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಸಮಸ್ಯೆಗಳನ್ನು ನಮಗೆ ಅರ್ಥವಾಗುವ ರೀತಿಯಲ್ಲಿ ಹೇಳಿ ಖಂಡಿತವಾಗಿ ಚರ್ಚೆ ಮಾಡೋಣ ಎಂದರು.
ರೈತರ ಜೀವನ ಉತ್ತಮವಾಗಬೇಕು. ಅದಕ್ಕೆ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ರೈತರು ತಕ್ಷಣ ಬೆಳೆದ ಫಸಲನ್ನು ಮಾರಾಟ ಮಾಡಬಾರದು. ಕಣದಲ್ಲೇ ಮಾರಾಟ ಮಾಡೋದ್ರಿಂದ ಸಮಸ್ಯೆ. ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಇದಕ್ಕೆ ಅವರ ಆರ್ಥಿಕ ಪರಿಸ್ಥಿತಿಯೂ ಕಾರಣವಿರಬಹುದು. ಅದಕ್ಕೆ ಗೋದಾಮುಗಳ ವ್ಯವಸ್ಥೆ ಇದೆ ಎಂದು ಹೇಳಿದರು.
ಇದನ್ನೂ ಓದಿ: ಭಗವದ್ಗೀತೆಯನ್ನು ನಮ್ಮ ಕುಟುಂಬದಲ್ಲೇ ಹೇಳಿಕೊಡಲಾಗುತ್ತದೆ: ಹೆಚ್ಡಿಕೆ
ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಪ್ರಿಯಾಂಕ್ ಖರ್ಗೆ, ಯಡಿಯೂರಪ್ಪನವರ ರೈತರ ಕಾಳಜಿಯನ್ನು ಒಪ್ಪುತ್ತೇನೆ. ಆದರೆ ಅವರ ಕಾಳಜಿಗೂ, ನಡೆಗೂ ಅಜಗಜಾಂತರವಿದೆ. ಅವರ ಕಾಲದಲ್ಲಿ ಮಾರಕ ಕೃಷಿ ಕಾಯ್ದೆ ತಂದ್ರು. ಎಪಿಎಂಸಿಗಳೇ ಮುಚ್ಚುವ ಹಂತಕ್ಕೆ ಬಂದಿವೆ. ಖಾಸಗಿ ಕಂಪನಿಗಳು ರೈತರನ್ನು ಶೋಷಣೆ ಮಾಡುತ್ತಿವೆ. ಅವರು ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.